ಮಂಡ್ಯದ ಅಯ್ಯಪ್ಪ ಭಕ್ತರ ವಾಹನಗಳ ಮೇಲೆ ಕಾಸರಗೋಡಿನಲ್ಲಿ ಕಲ್ಲೆಸೆತ

ಮಂಗಳೂರು: ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸವಾಗಿ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೇರಳದ ಕಾಸರಗೋಡಿನಲ್ಲಿ ಕರಾಳ ದಿನ ಆಚರಣೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ, ಕರ್ನಾಟಕದಿಂದ ಕೇರಳ ಹಾಗೂ ಕೇರಳದಿಂದ ಕರ್ನಾಟಕದತ್ತ ಬರುತ್ತಿದ್ದ ಬಸ್‍ಗಳ ಮೇಲೆ ಬೈಕ್‍ನಲ್ಲಿ ಬಂದವರು ಕಲ್ಲು ತೂರಾಟ ಮಾಡಿ ಬಂದಷ್ಟೇ ವೇಗದಲ್ಲಿ ಪರಾರಿಯಾಗಿದ್ದಾರೆ. ಈ ವೇಳೆ ಮಂಗಳೂರು, ಮಡಿಕೇರಿಗೆ ತೆರಳುತ್ತಿದ್ದ ಬಸ್ ಹಾಗೂ ಮಂಡ್ಯದಿಂದ ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರ ವಾಹನಗಳ ಮೇಲೆ ಕೂಡ ಕಲ್ಲು ತೂರಾಟ ನಡೆದಿದ್ದು, ಬಸ್‍ಗಳ ಗಾಜು ಜಖಂಗೊಂಡಿವೆ.

ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೂ ಕಲ್ಲು ತೂರಾಟ ನಡೆಸಿದ್ದಾರೆ. ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ಮುಸ್ಲಿಮ್ ಸಂಘಟನೆಯೊಂದರ ಕಾರ್ಯಕರ್ತರು ಈ ಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

ಕುಂಬಳೆ, ಮೊಗ್ರಾಲ್ ಪುತ್ತೂರು, ಮಂಜೇಶ್ವರದಲ್ಲಿ ಘಟನೆ ನಡೆದಿದ್ದು, ಹೆದ್ದಾರಿ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಸದ್ಯ ಮಂಡ್ಯದ ಅಯ್ಯಪ್ಪ ಭಕ್ತರಿಗೆ ಕಾಸರಗೋಡಿನ ಅಯ್ಯಪ್ಪ ಸೇವಾ ಸಂಘದಲ್ಲಿ ಆಶ್ರಯ ನೀಡಲಾಗಿದೆ.

Comments

Leave a Reply

Your email address will not be published. Required fields are marked *