ಕಲ್ಲು ತೂರಾಟ, ತಲವಾರ್‌ ಪ್ರದರ್ಶನ, ಸಿಕ್ಕ ಸಿಕ್ಕ ವಾಹನಗಳ ಮೇಲೆ ದಾಳಿ – ನಾಗಮಂಗಲ ಧಗಧಗಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ಸುದ್ದಿ

ಮಂಡ್ಯ: ಉದ್ರಿಕ್ತರ ಕಿಚ್ಚಿಗೆ ನಾಗಮಂಗಲ (Nagamangala) ಉದ್ವಿಘ್ನಗೊಂಡಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಶನಿವಾರದವರೆಗೆ 144 ಸೆಕ್ಷನ್‌ ಹಾಕಲಾಗಿದೆ. ಪ್ರಕರಣ ಸಂಬಂಧ ಇಲ್ಲಿಯವರೆಗೆ 46 ಮಂದಿಯನ್ನು ಬಂಧಿಸಲಾಗಿದೆ.

ಅಷ್ಟಕ್ಕೂ ಈ ಗಲಾಟೆ ನಡೆದಿದ್ದು ಹೇಗೆ? ಶಾಂತವಾಗಿದ್ದ ನಾಗಮಂಗಲ ಧಗಧಗಿಸಿದ್ದು (Communal Violence) ಹೇಗೆ ಎನ್ನುವುದರ ಸಂಪೂರ್ಣ ವಿವರವವನ್ನು ಇಲ್ಲಿ ನೀಡಲಾಗಿದೆ.

ಮೆರವಣಿಗೆ ಆರಂಭ
ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಮೆರವಣಿಗೆ (Ganpati Idol Procession) ಮೂಲಕ ತರಲಾಗುತ್ತಿತ್ತು. ಅದ್ದೂರಿ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆಗೆ ಆಯೋಜಕರು ಸಜ್ಜಾಗಿದ್ದರು.

ಕಲ್ಲು ತೂರಾಟ ಆರಂಭ
ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬರುತ್ತಿದ್ದಂತೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ದರ್ಗಾ ಬಳಿ ತಮಟೆ, ಡೊಳ್ಳು ಬಾರಿಸದಂತೆ ಕಿರಿಕ್ ಮಾಡಿ ಕಲ್ಲು ತೂರಿದ್ದಾರೆ. ಈ ವೇಳೆ ಎರಡು ಗುಂಪಿನ ಯುವಕರ ಮಧ್ಯೆ ವಾಕ್ಸಮರ ಶುರುವಾಗಿದೆ. ನೋಡನೋಡುತ್ತಿದ್ದಂತೆ ತಳ್ಳಾಟ, ನೂಕಾಟ ನಡೆದಿದೆ.

ಗಣೇಶ ಮೂರ್ತಿ ನಿಲ್ಲಿಸಿ ಪ್ರತಿಭಟನೆ
ಕಿಡಿಗೇಡಿಗಳ ಕೃತ್ಯ ಖಂಡಿಸಿ ಪೊಲೀಸ್ ಠಾಣೆ ಎದುರು ಗಣೇಶ ಮೂರ್ತಿಯನ್ನು ನಿಲ್ಲಿಸಿ ಹಿಂದೂಗಳು ಪ್ರತಿಭಟನೆ ಮಾಡಿದ್ದಾರೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಬೇಕು, ಕ್ರಮ ಜರುಗಿಸಬೇಕು ಅಂತ ಆಗ್ರಹಿಸಿದ್ದಾರೆ.  ಇದನ್ನೂ ಓದಿ: ನಾಗಮಂಗಲದಲ್ಲಿ 144 ಸೆಕ್ಷನ್‌ ಜಾರಿ – ಇಂದು ಪಟ್ಟಣದ ಶಾಲಾ, ಕಾಲೇಜುಗಳಿಗೆ ರಜೆ

ತಲವಾರ್ ಪ್ರದರ್ಶನ
ಈ ಸಂದರ್ಭದಲ್ಲಿ ಕಿಡಿಗೇಡಿಗಳ ಗುಂಪು ತಲವಾರ್ ಪ್ರದರ್ಶಿಸಿ, ಜೀವ ಬೆದರಿಕೆ ಹಾಕಿದೆ. ದರ್ಗಾ ಬಳಿ ಗಣೇಶ ಮೆರವಣೆಗೆ ಬಂದರೆ ನಿಮ್ಮನ್ನು ಉಳಿಸುವುದಿಲ್ಲ ಎಂಬಂತೆ ಜೀವ ಬೆದರಿಕೆ ಹಾಕಿ ತಲವಾರ್‌ಗಳನ್ನು ತೋರಿಸಿದ್ದಾರೆ.

ಘರ್ಷಣೆ; ಲಾಠಿ ಚಾರ್ಜ್
ಯಾವಾಗ ತಲವಾರ್ ಪ್ರದರ್ಶಿಸಿ ಕಿರಿಕ್‌ ಮಾಡಿದರೋ ಆಗ ಎರಡು ಗುಂಪಿನ ಯುವಕರ ಮಧ್ಯೆ ಘರ್ಷಣೆ ಶುರುವಾಗಿ ಪರಸ್ಪರ ಹೊಡೆದಾಟ ನಡೆದಿದೆ. ಘಟನಾ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಯುವಕರು ಜಮಾಯಿಸಿದ್ದರಿಂದ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಮತ್ತೆ ಕಲ್ಲು ತೂರಾಟ, ಪೋಲಿಸರಿಗೂ ಗಾಯ
ಲಾಠಿ ಚಾರ್ಜ್ ಆದ ಬಳಿಕ ಮತ್ತೆ ಕಿಡಿಗೇಡಿಗಳ ಗ್ಯಾಂಗ್ ಕಲ್ಲು ತೂರಾಟ ನಡೆಸಿ ಉದ್ದಟತನ ಮೆರೆದಿದೆ. ಕಲ್ಲು ತೂರಾಟದ ವೇಳೆ ಪೊಲೀಸ್ ಕಾನ್‌ಸ್ಟೇಬಲ್‌ ಅವರಿಗೂ ಗಾಯಗಳಾಗಿವೆ. ಇದನ್ನೂ ಓದಿ: ತಪ್ಪಿತಸ್ಥರ ವಿರುದ್ಧ ಕ್ರಮ, ಬಂಧನ ಆಗುತ್ತೆ: ಗಣೇಶ ವಿಸರ್ಜನೆ ಗಲಾಟೆ ಬಗ್ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ

ತಲವಾರ್ ವಶಕ್ಕೆ
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕಿಡಿಗೇಡಿಗಳ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಬಳಿಕ ಅವರ ಬಳಿಯಿದ್ದ ತಲವಾರ್‌ ಅನ್ನು ವಶಕ್ಕೆ ಪಡೆದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಿದರು.

ಅಂಗಡಿಗಳ ಮೇಲೆ ಕಲ್ಲು:
ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಷ್ಟರಲ್ಲಿ ಉದ್ರಿಕ್ತರ ಗುಂಪಿನಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿ ಮತ್ತೆ ಕಿಡಿಗೇಡಿ ಕೃತ್ಯಕ್ಕೆ ಮುಂದಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಿಡಿಗೇಡಿಗಳು ಸೇರಿದ ನಂತರ ಅಲ್ಲೇ ಇದ್ದ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನೂರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತರು ನಿರಂತರವಾಗಿ ಕಲ್ಲು ತೂರಾಟ ನಡೆಸುವ ಮೂಲಕ ಗಲಭೆಯನ್ನು ಮತ್ತಷ್ಟು ಜಾಸ್ತಿ ಮಾಡಿದ್ದಾರೆ.

ಪೆಟ್ರೋಲ್ ಬಾಂಬ್ ದಾಳಿ
ಕಲ್ಲು ತೂರಾಟ ನಡೆಸುವುದರ ಜೊತೆ ಕಿಡಿಗೇಡಿ ಯುವಕರು ಪೆಟ್ರೋಲ್ ಬಾಂಬ್ ದಾಳಿ ಮಾಡಿ, ಅಂಗಡಿಗಳಿಗೆ ವಾಹನಗಳಿಗೂ ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿದ್ದಾರೆ. ಇದರ ಜೊತೆಗೆ ಅಲ್ಲೇ ಇದ್ದ ಗುಜರಿ ಅಂಗಡಿಯೊಂದು ಕಿಡಿಗೇಡಿಗಳ ಅಟ್ಟಹಾಸಕ್ಕೆ ಸುಟ್ಟು ಭಸ್ಮವಾಗಿದೆ.

ಸಿಕ್ಕ ಸಿಕ್ಕ ವಾಹನಗಳ ಮೇಲೆ ದಾಳಿ
ಅಂಗಡಿ, ಮುಂಗಟ್ಟು ಮಾತ್ರವೇ ಅಲ್ಲ, ರಸ್ತೆಯಲ್ಲಿ ಸಿಕ್ಕ-ಸಿಕ್ಕ ವಾಹನಗಳ ಮೇಲೂ ಪೆಟ್ರೋಲ್ ಬಾಂಬ್ ದಾಳಿ ಮಾಡಿದ್ದಾರೆ. ನೋಡನೋಡುತ್ತಿದ್ದಂತೆ ಅಲ್ಲಿದ್ದ ವಾಹನಗಳು ಸುಟ್ಟು ಕರಕಲಾಗಿದೆ.

ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ
ಇಷ್ಟೆಲ್ಲಾ ಘಟನೆ ನಂತರ ನಾಗಮಂಗಲದಲ್ಲಿ ಉದ್ವಿಗ್ನ ವಾತಾವರಣ ಮತ್ತಷ್ಟು ಹೆಚ್ಚಾಯಿತು. ಎತ್ತ ನೋಡಿದರೂ ಬೆಂಕಿಯ ಜ್ವಾಲೆ ಜೋರಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಇದನ್ನೂ ಓದಿ: ಸರ್ಕಾರ ಒಂದು ಗುಂಪನ್ನು ಓಲೈಸುತ್ತಿರೋದ್ರಿಂದ ಇಂಥ ಉದ್ಧಟತನ ಆಗ್ತಿದೆ: ಮಂಡ್ಯ ಗಣೇಶ ವಿಸರ್ಜನೆ ಗಲಾಟೆಗೆ ಹೆಚ್‌ಡಿಕೆ ಬೇಸರ

 

ಬಿಲ್ಡಿಂಗ್ ಒಳಗಡೆಯಿಂದ ಕಲ್ಲು ತೂರಾಟ
ಇದಾದ ಬಳಿಕ ಮತ್ತೆ ಬಿಲ್ಡಿಂಗ್ ಒಳಗಡೆಯಿಂದ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಒಬ್ಬೊಬ್ಬರಾಗಿ ಹಿಂದೂ ಯುವಕರ ಮೇಲೆ ಕಲ್ಲಿನ ದಾಳಿಯೇ ಮಾಡುತ್ತಾರೆ. ಶಾಂತವಾಗಿದ್ದ ಯುವಕರ ಮೇಲೆ ಮತ್ತೆ ಕಲ್ಲು ತೂರಾಟ ಮಾಡುವ ಮೂಲಕ ಪರಿಸ್ಥಿತಿಯನ್ನು ಮತ್ತೆ ಉದ್ವಿಗ್ನ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಾರೆ.

ವಾಹನಗಳ ಮೇಲೆ ರಾಡ್‌ನಿಂದ ದಾಳಿ
ಇದಷ್ಟೆ ಅಲ್ಲದೆ ರಸ್ತೆ ಬದಿ ನಿಂತಿದ್ದ ವಾಹನಗಳ ಮೇಲೂ ರಾಡ್‌ನಿಂದ ದಾಳಿ ಮಾಡಿ ಜಖಂಗೊಳಿಸುತ್ತಾರೆ. ಕಾರು, ಬೈಕ್, ಸ್ಕೂಟರ್‌ಗಳ ಮೇಲೆ ದಾಳಿ ಮಾಡುತ್ತಾರೆ. ಮತ್ತೆ ಉದ್ದಟತನ ಪ್ರದರ್ಶಿಸಿದ ಗ್ಯಾಂಗ್ ಹಿಂದೂಗಳ ವಾಹನಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಾರೆ. ಅಲ್ಲದೇ ಹಿಂದೂ ಯುವಕರ ಮೇಲೂ ಹಲ್ಲೆ ಮಾಡಿದ್ದಾರೆ. ಈ ವೇಳೆ ಕೆಲ ಯುವಕರಿಗೆ ಗಾಯಗಳಾದ ಘಟನೆಯೂ ನಡೆದಿದೆ.

ಪೊಲೀಸ್ ಭದ್ರತೆ ಹೆಚ್ಚಳ
ಪರಿಸ್ಥಿತಿಯನ್ನು ನಿಯಂತ್ರಣ ಮಾಡಲೇಬೇಕು ಎಂದು ಪಣತೊಟ್ಟ ಖಾಕಿ ಟೀಂ ಭದ್ರತೆ ಹೆಚ್ಚಳ ಮಾಡಿ ನಾಗಮಂಗಲಕ್ಕೆ ಬರುವ ನಾಲ್ಕು ದಿಕ್ಕಿನಲ್ಲೂ ವಾಹನಗಳನ್ನ ತಡೆದು, ನಾಗಮಂಗಲಕ್ಕೆ ಎಂಟ್ರಿಕೊಡಂತೆ ವಾರ್ನ್ ಮಾಡಿ ನಾಕಬಂದಿ ಹಾಕ್ತಾರೆ.

ಮತ್ತೆ ಲಾಠಿ ಚಾರ್ಜ್; ಪರಿಸ್ಥಿತಿ ಕಂಟ್ರೋಲ್
ಯಾವಾಗ ಪೊಲೀಸ್ ಭದ್ರತೆ ಹೆಚ್ಚಾಗುತ್ತದೋ ಅವಾಗ ಅಸಲಿ ಆಟಕ್ಕೆ ಬ್ರೇಕ್ ಬಿತ್ತು. ಫೀಲ್ಡ್‌ಗೆ ಇಳಿದ ಪೊಲೀಸರು ಗಲ್ಲಿಗಲ್ಲಿಗೂ ನುಗ್ಗಿ ಕಿಡಿಗೇಡಿಗಳ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತಾರೆ.

ಹಣ್ಣುಗಳ ಅಂಗಡಿ ಚೆಲ್ಲಾಪಿಲ್ಲಿ
ಅನ್ಯಕೋಮಿನ ಕಿಡಿಗೇಡಿಗಳ ಅಟ್ಟಹಾಸ ಹೇಗಿತ್ತು ಅಂದರೆ ಹಣ್ಣುಗಳ ಅಂಗಡಿಗಳ ಮೇಲೂ ದಾಳಿ ಮಾಡಿದ್ದಾರೆ. ಹಣ್ಣುಗಳೆಲ್ಲಾ ರಸ್ತೆ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಎಸ್‌ಪಿ, ಡಿಸಿ, ಐಜಿಪಿ ಭೇಟಿ, ರೌಂಡ್ಸ್
ಇದಾದ ಬಳಿಕ ಘಟನಾ ಸ್ಥಳಕ್ಕೆ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ, ಐಜಿಪಿ ಬೋರಲಿಂಗಯ್ಯ ಸೇರಿದಂತೆ ಜಿಲ್ಲಾಧಿಕಾರಿ ಕೂಡ ಭೇಟಿ ಕೊಟ್ಟು ನಾಗಮಂಗಲ ಪಟ್ಟಣವನ್ನು ಒಂದು ರೌಂಡ್ಸ್ ಹಾಕಿ ಪರಿಶೀಲನೆ ನಡೆಸುತ್ತಾರೆ.

ಠಾಣೆ ಪಕ್ಕದ ಅಂಗಡಿಗೆ ಬೆಂಕಿ
ಪೊಲೀಸರು ರೌಂಡ್ಸ್ ಹಾಕಿ ತೆರಳಿದ ಬಳಿಕವೂ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಅಂಗಡಿಗೆ ಬೆಂಕಿ ಹಚ್ಚಿ ಉದ್ದಟತನ ಮೆರೆದಿದ್ದಾರೆ.