ಕೋಲಾರ: ಸಾಕುತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.
ಕೋಲಾರ ನಗರ ನಿವಾಸಿಯಾದ ಅಪರಾಧಿ ಚಂದ್ರು (40) ಜೀವಾವಧಿ ಶಿಕ್ಷೆಗೆ ಒಳಗಾಗಿರುವವನು. 2015 ರ ಡಿಸೆಂಬರ್ 17 ರಂದು ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆಯಾಗಿದ್ದು, ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಗರ್ಭಿಣಿಯಾದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ತಂದೆಯನ್ನು ಬಂಧಿಸಿದ್ದು, ಪ್ರಸ್ತುತ ಕೋಲಾರದ 2ನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ನಡೆದಿದ್ದೇನು?: ಮೂಲತಃ ಬೆಂಗಳೂರಿನವರಾದ ಸಂತ್ರಸ್ತೆಯ ತಾಯಿ ಚಂದ್ರು ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದರು. ಇದರ ಬಗ್ಗೆ ತಿಳಿದ ಪತಿ ಪತ್ನಿಯನ್ನು ಬಿಟ್ಟು ಹೋಗಿದ್ದರು. ಬಳಿಕ ಚಂದ್ರುವನ್ನು ಎರಡನೇ ಮದುವೆಯಾಗಿದ್ದರು. ಮದುವೆಯಾದಾಗ ತನ್ನ ಜೊತೆ ಮಗಳನ್ನು ಕೂಡ ಆತನ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ ಪಾಪಿ ಮಲತಂದೆ ಯಾರೂ ಇಲ್ಲದ ಸಮಯದಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದ. ಯಾರಿಗೂ ಹೇಳಬಾರದು ಎಂದು ಜೀವ ಬೆದರಿಕೆ ಹಾಕಿದ್ದ. ಕೊನೆಗೆ ಭಯದಿಂದ ಸಂತ್ರಸ್ತೆ ತಾಯಿಗೂ ಕೂಡ ವಿಷಯ ಹೇಳಿರಲಿಲ್ಲ. ಮೂರು ತಿಂಗಳು ಗರ್ಭಿಣಿಯಾದ ನಂತರ ತಾಯಿಗೆ ಎಲ್ಲಾ ವಿಚಾರವನ್ನು ತಿಳಿಸಿದ್ದಳು. ಬಳಿಕ ತಾಯಿ ಪೊಲೀಸ್ ಠಾಣೆಗೆ ಹೋಗಿ ಚಂದ್ರು ವಿರುದ್ಧ ದೂರು ನೀಡಿದ್ದರು.

ಪೊಲೀಸರು ಚಂದ್ರವನ್ನು ಬಂಧಿಸಿ ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ್ದು, ಇದೀಗ 2ನೇ ಜಿಲ್ಲಾ ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸದ್ಯ ಸಂತ್ರಸ್ತೆಗೆ ಒಂದು ಮಗುವಾಗಿದ್ದು, ತಾಯಿ ಮಗಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.



Leave a Reply