ರಾಜ್ಯದ ಅತಿ ಎತ್ತರದ ಮನುಷ್ಯನ ಬಾಳಲ್ಲಿ ಬಿರುಗಾಳಿ!

ಬೆಂಗಳೂರು: ರಾಜ್ಯದ ಅತಿ ಎತ್ತರದ ಮನುಷ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಪರೂಪದ ವ್ಯಕ್ತಿಯ ಬಾಳಲ್ಲಿ ಇದೀಗ ಬಿರುಗಾಳಿ ಬೀಸಿದೆ.

ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಶಿರಗನಹಳ್ಳಿ ಗ್ರಾಮದ ನಿವಾಸಿ ಕುಮಾರ್ (35) ರಾಜ್ಯದ ಎತ್ತರದ ವ್ಯಕ್ತಿಯಾಗಿದ್ದಾರೆ. ಬರೋಬ್ಬರಿ 7 ಅಡಿ 2 ಇಂಚು ಎತ್ತರ ಇರುವ ಇವರು ಇತ್ತೀಚಿಗೆ ಪಿಟ್ಯೂಟರಿ ಮೈಕ್ರೋ ಡೆನೋಮಾ ರೋಗದಿಂದ ಬಳಲಿ ಬೆಂಡಾಗಿದ್ದಾರೆ.

11 ವರ್ಷದ ಬಾಲಕನಾಗಿರುವಾಗಲೇ ಈ ಕಾಯಿಲೆಯಿಂದ ಬಳಲಿ ಕುಮಾರ್ ದೇಹ ವಿನ್ಯಾಸದಲ್ಲಿ ಬದಲಾವಣೆಯಾಗಿ ಅತೀ ಉದ್ದವಾಗಿ ಬೆಳೆದು ನಿಂತಿದ್ದು, ಸದ್ಯ ವೈದ್ಯಕೀಯ ಲೋಕಕ್ಕೆ ಸವಾಲಾಗಿ ನಿಂತಿದ್ದಾರೆ. ತನ್ನ ಕುಟುಂಬಕ್ಕೆ ಆಸರೆಯಾಗಿದ್ದ ಕುಮಾರ್ ಕೂಲಿನಾಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತಿದ್ದರು. ಆದರೆ ಇತ್ತೀಚಿಗೆ ಅಪಘಾತವಾಗಿದ್ದರಿಂದ ಕಾಲು ಮುರಿತವಾಗಿ ನಡೆಯಲು ಸಹ ಆಗದ ಸ್ಥಿತಿ ತಲುಪಿದ್ದಾರೆ.

ಇನ್ನೂ ತಂದೆ ರಾಮಕೃಷ್ಣಯ್ಯ ಸಹ ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ತಾಯಿ ನಾಗರತ್ನಮ್ಮ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಮಗನ ಅಪಘಾತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಕುಮಾರ್ ಪತ್ನಿ ಕೂಡ ಇವರ ಸ್ಥಿತಿ ನೋಡಿ ಮನೆ ಬಿಟ್ಟು ಹೋಗಿದ್ದು, ತನ್ನ ಬಡ ರೈತಾಪಿ ಕುಟುಂಬವನ್ನು ಸಾಗಿಸುವುದೇ ಕುಮಾರ್ ಅವರಿಗೆ ಕಷ್ಟಕರವಾಗಿದೆ. ಹೀಗಾಗಿ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ, ಯಾರಾದರೂ ದಾನಿಗಳು ನಮಗೆ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆಯನ್ನು ಇಟ್ಟುಕೊಂಡು ಕುಮಾರ್ ಕುಟುಂಬ ದಿನ ದೂಡುತ್ತಿದೆ.

Comments

Leave a Reply

Your email address will not be published. Required fields are marked *