ಮೇಕೆದಾಟು ಯೋಜನೆ: ತಮಿಳುನಾಡು ಖ್ಯಾತೆಗೆ ರಾಜ್ಯ ಸಂಸದರಿಂದ ಪ್ರತಿಭಟನೆಯ ತಿರುಗೇಟು

ನವದೆಹಲಿ: ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡಿನ ನಡೆ ಖಂಡಿಸಿ ರಾಜ್ಯ ಸಂಸದರು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ.

ಕರ್ನಾಟಕದ ಮೇಕೆದಾಟು ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಅನುಮತಿ ನೀಡಿದ್ದರ ಬೆನ್ನಲ್ಲೇ ತಮಿಳುನಾಡು ಖ್ಯಾತೆ ತೆಗೆದಿತ್ತು. ಅಲ್ಲದೇ ಯೋಜನೆಗೆ ತಡೆ ಕೋರುವಂತೆ ಪ್ರಧಾನಿಗೆ ಪತ್ರ ಬರೆದಿದ್ದಲ್ಲದೆ, ಕಾನೂನು ಹೋರಾಟ ಹಾಗೂ ಸಂಸತ್ ಬಳಿ ಪ್ರತಿಭಟನೆಯನ್ನು ನಡೆಸಿತ್ತು.

ಈ ಹಿನ್ನೆಲೆಯಲ್ಲಿ ತಮಿಳುನಾಡು ನಡೆಯನ್ನು ಖಂಡಿಸಿ, ಇಂದು ಬೆಳಗ್ಗೆ 10 ಗಂಟೆಗೆ ಸಂಸತ್ ಬಳಿ ಇರುವ ಗಾಂಧಿ ಪ್ರತಿಮೆ ಬಳಿ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಲಿದ್ದಾರೆ. ಪ್ರತಿಭಟನೆಯಲ್ಲಿ ರಾಜ್ಯದ ಲೋಕಸಭೆ ಹಾಗೂ ರಾಜ್ಯಸಭೆಯ ಎಲ್ಲಾ ಸಂಸದರು ಭಾಗಿಯಾಗಲಿದ್ದಾರೆ. ರಾಜ್ಯದ ಎಲ್ಲ ಸಂಸದರು ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚಳಿಗಾಲದ ಸಂಸತ್ ಅಧಿವೇಶನ ಆರಂಭದಿಂದಲೂ ತಮಿಳುನಾಡಿನ ಸಂಸದರು ಸಂಸತ್ ನ ಒಳಗೂ ಮತ್ತು ಹೊರಗೂ ನಿರಂತರ ಪ್ರತಿಭಟನೆ ನಡೆಸುತ್ತಿದ್ದರು. ಮೇಕೆದಾಟು ಯೋಜನೆ ತಮಿಳುನಾಡಿಗೆ ಮಾರಕವಾಗಲಿದ್ದು, ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬಾರದು ಹಾಗೂ ಜಲ ಆಯೋಗ ನೀಡಿರುವ ಆರಂಭಿಕ ಒಪ್ಪಿಗೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದರು. ತಮಿಳುನಾಡಿನ ಈ ಹೋರಾಟಕ್ಕೆ ಪ್ರತಿ ಹೋರಾಟ ರೂಪಿಸಲು ಕಳೆದ ಗುರುವಾರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ನಿವಾಸದಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಂಸದರ ಸಭೆ ನಡೆಸಿ ಸಂಸತ್ ನಲ್ಲಿ ಪ್ರತಿಭಟನೆ ನಡೆಸಲು ತಿರ್ಮಾನಿಸಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *