ಕೊಡಗಿನಲ್ಲಿ ಅದ್ಧೂರಿಯಾಗಿ ನಡೆಯಿತು ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ

ಕೊಡಗು: 27ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಓಟವನ್ನು ಕಗ್ಗೋಡ್ಲುವಿನ ದಿವಂಗತ ಸಿ.ಡಿ.ಬೋಪಯ್ಯನವರ ಗದ್ದೆ ಬಯಲಿನಲ್ಲಿ ಅದ್ಧೂರಿಯಾಗಿ ನಡೆಯಿತು.

ಜಿಲ್ಲಾ ಮತ್ತು ತಾಲ್ಲೂಕು ಯುವ ಒಕ್ಕೂಟ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕೆಸರುಗದ್ದೆ ಓಟ, ವಾಲಿಬಾಲ್ ಹಾಗೂ ಇನ್ನೂ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಕ್ರೀಡಾಪ್ರೇಮಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಆಟಗಳು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ, ಇಂತಹ ಹಳ್ಳಿ ಆಟಗಳಿಗೆ ಪ್ರೋತ್ಸಾಹ ನೀಡಲು ಕ್ರೀಡಾ ಇಲಾಖೆಯು ಸ್ಥಳೀಯ ಸಂಘಟನೆ ಸಹಾಯದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಕಳೆದ 27 ವರ್ಷಗಳಿಂದ ನಿರಂತರವಾಗಿ ರಾಜ್ಯ ಮಟ್ಟದ ಕೆಸರು ಗದ್ದೆ ಹಾಗೂ ವಾಲಿಬಾಲ್ ಆಯೋಜಿಸುತ್ತಿರುವ ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟ, ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಈ ಕಾರ್ಯಕ್ರಮದಲ್ಲಿ ಚಿಕ್ಕವರು-ದೊಡ್ಡವರೆನ್ನುವ ಭೇದವಿಲ್ಲದೇ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು. ಮಹಿಳೆಯರ ಹಗ್ಗ-ಜಗ್ಗಾಟ ಸಾಕಷ್ಟು ಕುತೂಹಲ ಮೂಡಿಸಿತ್ತು. ಮಕ್ಕಳಿಗಾಗಿ ನಡೆದ ಕೆಸರುಗದ್ದೆ ಓಟವು ಈ ಬಾರಿ ವಿಶೇಷವಾಗಿತ್ತು.

ಸ್ಪರ್ಧೆಗೆ ಆಗಮಿಸಿದ್ದ ಕ್ರೀಡಾಪ್ರೇಮಿಗಳು ಕೆಸರು ಗದ್ದೆ ಓಟ ಹಾಗೂ ವಾಲಿಬಾಲ್ ಆಟದಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Comments

Leave a Reply

Your email address will not be published. Required fields are marked *