ಕಾಮನ್‍ವೆಲ್ತ್ ನಲ್ಲಿ ಬೆಳ್ಳಿ ಪದಕ ಗೆದ್ದ ಗುರುರಾಜ್ ಪೂಜಾರಿಗೆ ರಾಜ್ಯ ಸರ್ಕಾರದಿಂದ ಮೋಸ!

ಉಡುಪಿ: ಈ ಬಾರಿಯ ಕಾಮನ್ ವೆಲ್ತ್ ನಲ್ಲಿ ದೇಶಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಕುಂದಾಪುರದ ಗುರುರಾಜ್ ಪೂಜಾರಿಗೆ ರಾಜ್ಯ ಸರ್ಕಾರ ಮೋಸ ಮಾಡಿದೆ.

25 ಲಕ್ಷ ರೂ. ಪ್ರೋತ್ಸಾಹ ಧನವನ್ನೂ ನೀಡಿಲ್ಲ, ಉದ್ಯೋಗವನ್ನೂ ಕೊಡಿಸಿಲ್ಲ. ದೇಶಕ್ಕಾಗಿ ಪದಕ ಗೆದ್ದು ಕೊಟ್ಟು ಮೂರು ತಿಂಗಳು ಕಳೆದರೂ ಈ ಬಡ ಕ್ರೀಡಾಪಟುವಿಗೆ ಸರ್ಕಾರದ ಆರ್ಥಿಕ ನೆರವು ತಲುಪಿಲ್ಲ. ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಹೆಸರು ತಂದ ಈ ವೇಟ್ ಲಿಫ್ಟಿಂಗ್, ಫೈಲುಗಳನ್ನು ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾದ ಸ್ಥಿತಿ ಎದುರಿಸಬೇಕಾಗಿದೆ.

ಬಡತನದಲ್ಲೇ ಕಷ್ಟಪಟ್ಟು ಸಾಧನೆ ಮಾಡಿರುವ ಗುರುರಾಜ್ ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಭೇಟೆಯನ್ನು ಗುರುರಾಜ್ ಆರಂಭಿಸಿದ್ದರು. 56 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟಿದ್ದರು. ಈ ಮೂಲಕ ದಿನ ಬೆಳಗಾಗೋದ್ರೊಳಗೆ ಕರ್ನಾಟಕದ ಈ ಕ್ರೀಡಾಪಟು, ಭಾರತದಾದ್ಯಂತ ಮನೆ ಮಾತಾದ್ರು. ಅಷ್ಟೇ ಯಾಕೆ ನಮ್ಮ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರ ಬಹುಮಾನವಾಗಿ 25 ಲಕ್ಷ ರೂ. ಘೋಷಿಸಿತ್ತು. ಅಲ್ಲದೇ ಗುರುರಾಜ್ ಗೆ ಕೆಲಸ ಕೊಡಿಸುವುದಾಗಿಯೂ ಭರವಸೆ ನೀಡಿತ್ತು. ಈ ಭರವಸೆ ನೀಡಿ ಸುಮಾರು ಮೂರು ತಿಂಗ್ಳಾದ್ರೂ ಇದೂವರೆಗೂ ಬಹುಮಾನವೂ ಇಲ್ಲ, ಉದ್ಯೋಗವೂ ಸಿಕ್ಕಿಲ್ಲ.

ಗುರುರಾಜ್ ತಂದೆ ಮಹಾಬಲ ಪೂಜಾರಿ ಇಂದಿಗೂ ಆಟೋ ಓಡಿಸುತ್ತಿದ್ದಾರೆ. ಬೇರೆ ರಾಜ್ಯದಲ್ಲಿ ಬೆಳ್ಳಿ ಗೆದ್ದ ಕ್ರೀಡಾಪಟುಗಳಿಗೆ 1 ಕೋಟಿ ರೂ. ವರೆಗೆ ಬಹುಮಾನ ನೀಡಿದ್ದಾರೆ. ಅಲ್ಲಿ ಬಹುಮಾನ ಅವರ ಕೈ ಸೇರಿದ್ದೂ ಆಗಿದೆ. ಆದರೆ ಇಲ್ಲಿ ಸರ್ಕಾರದ ಮುಂದೆ ಇಂದು ಈ ಸಾಧಕ ಕೈಚಾಚಿ ನಿಲ್ಲುವ ಸ್ಥಿತಿ ಬಂದಿದೆ.

ಒಟ್ಟಿನಲ್ಲಿ ಕಠಿಣ ಅಭ್ಯಾಸ ನಡೆಸಿ 2020ರಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕನಸು ಈ ಕ್ರೀಡಾಪಟುವಿನದ್ದು. ಆದರೆ ಸರ್ಕಾರದ ಪ್ರೋತ್ಸಾಹ ನೋಡಿದ್ರೆ ನಮ್ಮ ಸರ್ಕಾರಕ್ಕಿರುವ ಹಂಬಲವೇನೆಂದು ತಿಳಿದು ಬರುತ್ತಿದೆ.

Comments

Leave a Reply

Your email address will not be published. Required fields are marked *