ಕೊನೆಗೂ ಬಿಬಿಎಂಪಿಗೆ 50 ಸಾವಿರ ದಂಡ ಕಟ್ಟಿದ ರಾಜ್ಯ ಕ್ರಿಕೆಟ್ ಸಂಸ್ಥೆ

ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯಾವಳಿ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದ ಹಿನ್ನಲೆ ಬಿಬಿಎಂಪಿ ರಾಜ್ಯ ಕ್ರಿಕೆಟ್ ಸಂಸ್ಥೆಗೆ ದಂಡ ವಿಧಿಸಿತ್ತು. ಬಿಬಿಎಂಪಿ ವಿಧಿಸಿದ್ದ ದಂಡ ಪಾವತಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆ.ಎಸ್.ಸಿ.ಎ) 50 ಸಾವಿರ ರೂ. ಡಿಡಿಯನ್ನು ನೀಡಿದೆ.

ಕೆ.ಎಸ್.ಸಿ.ಎ ಸಂಸ್ಥೆಯೂ 50 ಸಾವಿರ ರೂ. ಮೊತ್ತದ ಡಿಡಿಯನ್ನು ಜ.28 ರಂದು ಬಿಬಿಎಂಪಿಗೆ ಸಲ್ಲಿಸುವ ಮೂಲಕ ದಂಡದ ಮೊತ್ತವನ್ನು ಪಾವತಿಸಿದ್ದಾರೆ. ದಂಡ ಹಾಕಿ ಒಂಭತ್ತು ದಿನಗಳ ಬಳಿಕ ಕೆ.ಎಸ್.ಸಿ.ಎ ದಂಡ ಪಾವತಿಸಿದೆ. ದಂಡ ಪಾವತಿಸಲು ಪಾಲಿಕೆ ಡೆಡ್ ಲೈನ್ ಸಹ ಕೊಟ್ಟಿತ್ತು. ಸಾಕಷ್ಟು ಜನಜಾಗೃತಿ ಬಳಿಕವೂ ಸ್ಟೇಡಿಯಂ ಒಳಗೆ ಪ್ಲಾಸ್ಟಿಕ್ ಕಪ್, ಬಾಟಲ್ಸ್, ರ್ಯಾಪರ್ಸ್, ಫ್ಲೆಕ್ಸ್ ಗಳನ್ನು ಬಳಸಿದ ಹಿನ್ನಲೆ ದಂಡ ಹಾಕಲಾಗಿತ್ತು.

ಈ ಸಂಬಂಧ ಮೇಯರ್ ಗೌತಮ್ ಕುಮಾರ್ ಮಾತನಾಡಿ, ಮಾಧ್ಯಮಗಳು ದಂಡ ಬಾಕಿ ಬಗ್ಗೆ ಸುದ್ದಿ ಪ್ರಸಾರವಾಗಿದರಿಂದಲೇ ಎಲ್ಲ ಒಳ್ಳೆಯದಾಗಿತ್ತು. ಕಡಿಮೆ ಮೊತ್ತವಾದರೂ ಪ್ಲಾಸ್ಟಿಕ್ ಬಳಕೆ ತಪ್ಪು ಎಂದು ಅರಿತು ದಂಡ ಕಟ್ಟಿರುವುದು ಸ್ವಾಗತರ್ಹ ಎಂದರು.

ಆಸ್ಟ್ರೇಲಿಯಾ ವಿರುದ್ಧದ 3ನೇ ಹಾಗೂ ಅಂತಿಮ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದಿದ್ದ ಟೀಂ ಇಂಡಿಯಾ ಸರಣಿಯನ್ನು ಗೆದ್ದು ಬೀಗಿತ್ತು. ಪಂದ್ಯದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರೋಗ್ಯಾಧಿಕಾರಿಗಳು ತಪಾಸಣೆ ನಡೆಸಿದ್ದರು. ಈ ವೇಳೆ ಪ್ಲಾಸ್ಟಿಕ್ ಕಪ್, ಬ್ಯಾನರ್ ಬಳಕೆ ಮಾಡಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿ ಮತ್ತೆ ಮರುಕಳಿಸದಂತೆ 50 ಸಾವಿರ ರೂ. ದಂಡ ವಿಧಿಸಲಾಗಿತ್ತು. ಈ ಕುರಿತು ಬಿಬಿಎಂಪಿ ಆಯುಕ್ತರಾದ ಬಿಎಚ್ ಅನಿಲ್‍ಕುಮಾರ್ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.

Comments

Leave a Reply

Your email address will not be published. Required fields are marked *