ಎಟಿಎಂಗೆ ತುಂಬ ಬೇಕಿದ್ದ 52 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿ ದನದ ಕೊಟ್ಟಿಗೆಯಲ್ಲಿ ಬಚ್ಚಿಟ್ಟ!

ಬೆಂಗಳೂರು: ದೂರ ದೂರಿಂದ ಬೆಂಗಳೂರಿಗೆ ಕೆಲಸ ಅರಿಸಿಕೊಂಡು ಬಂದು ಎಟಿಎಂಗೆ ಹಣ ತುಂಬುವ ಕೆಲಸ ಪಡೆದ ಯುವಕನೊಬ್ಬ ನಗರದ ಹೈಫೈ ಜೀವನಕ್ಕೆ ಮರಳಾದ ಪರಿಣಾಮ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.

ಮೂಲತಃ ಕೊಡಗು ನಿವಾಸಿಯಾಗಿರುವ ಪರಮೇಶ್ ತಾನು ಮಾಡಿದ ಕೃತ್ಯಕ್ಕೆ ಜೈಲು ಸೇರಿದ ಯುವಕ. ಈತ ಎಲ್‍ಎಲ್‍ಬಿ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಬೆಂಗಳೂರಿಗೆ ಕೆಲಸ ಅರಿಸಿಕೊಂಡು ಬಂದಿದ್ದ. ನಗರದ ಗಾರೆಪಾಳ್ಯದಲ್ಲಿ ವಾಸವಿದ್ದು ಕೊಂಡು ಸಿಎಂಎಸ್ ಏಜನ್ಸಿಯಲ್ಲಿ ಎಟಿಎಂಗೆ ಹಣ ತುಂಬುವ ಕೆಲಸ ಮಾಡುತ್ತಿದ್ದ. ಆದರೆ ಮಾರ್ಚ್ 3 ರಂದು 28 ಎಟಿಎಂಗೆ ತುಂಬ ಬೇಕಿದ್ದ ಸುಮಾರು 1.30 ಕೋಟಿ ಹಣದಲ್ಲಿ ಅರ್ಧ ಹಣ ಹಾಕಿ ವಾಪಸ್ ಬಂದು ಉಳಿದ 52 ಲಕ್ಷ ರೂ. ಹಣದೊಂದಿಗೆ ಕೂಡ್ಲೂಗೇಟ್ ಬಳಿಯ ಆಫೀಸಿಗೆ ವಾಪಸು ಬಂದು ಬಳಿಕ ಹಣದೊಂದಿಗೆ ತನ್ನೂರಿಗೆ ಪರಾರಿಯಾಗಿದ್ದ.

ಕೊಡಗಿನ ಸೋಮಾರಪೇಟೆಗೆ ತೆರಳಿದ ಪರಮೇಶ್ ಬಳಿಕ ಆ ಹಣವನ್ನು ದನದ ಕೊಟ್ಟಿಗೆಯಲ್ಲಿ ಬಚ್ಚಿಟ್ಟಿದ್ದ. ಇತ್ತ ಎಟಿಎಂ ನಲ್ಲಿ ಹಣ ಬಾರದ ಹಿನ್ನೆಲೆ ಏಜೆನ್ಸಿಗೆ ದೂರುಗಳು ಬಂದಿತ್ತು. ಈ ಕುರಿತು ವಿಚಾರಣೆ ನಡೆಸಿದ ವೇಳೆ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಈ ಕುರಿತು ದೂರು ಪಡೆದ ಪೊಲೀಸರು ತನಿಖೆ ಆರಂಭಿಸಿದ್ದರು. ಅಂದು ಎಟಿಎಂ ಗೆ ಹಣ ತುಂಬಲು ಕಳುಹಿಸಿದ್ದ ಪರಮೇಶ್ ಕೃತ್ಯ ನಡೆಸಿದ ಕುರಿತು ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಬಳಿಕ ಆತ ಕದ್ದ ಹಣವನ್ನು ದನದ ಕೊಟ್ಟಿಗೆಯಲ್ಲಿ ಬಚ್ಚಿಟ್ಟ ಮಾಹಿತಿ ತಿಳಿದ ಪೊಲೀಸರು 52 ಲಕ್ಷ ರೂ. ಹಣ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತರು ಸಾರ್ವಜನಿಕ ಹಣದ ಬಗ್ಗೆ ಬೇಜಾವಾಬ್ದಾರಿತನ ವರ್ತನೆ ತೋರಿದ ಸಿಎಂಎಸ್ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *