SSLC ಪರೀಕ್ಷೆ ನಿರ್ಧಾರದಿಂದ ಸರ್ಕಾರ ತಕ್ಷಣವೇ ಹಿಂದೆ ಸರಿಯಬೇಕು: ಹೆಚ್‍ಡಿಕೆ ಆಗ್ರಹ

– ಅವಘಡ ಸಂಭವಿಸಿದ್ರೆ ಶಿಕ್ಷಣ ಸಚಿವರು, ರಾಜ್ಯ ಸರ್ಕಾರವೇ ಹೊಣೆ
– 24 ಲಕ್ಷ ಮಂದಿಯ ಜೀವ, ಭವಿಷ್ಯದೊಂದಿಗೆ ಚೆಲ್ಲಾಟ

ಬೆಂಗಳೂರು: ಗುರುವಾರದಿಂದ ರಾಜ್ಯದಾದ್ಯಂತ SSLC ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿರ್ಧಾರದಿಂದ ತಕ್ಷಣವೇ ಹಿಂದೆ ಸರಿಯಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕೊರೊನಾದಿಂದ ಮೂರು ತಿಂಗಳಿನಿಂದ ಮುಂದೂಡಿಕೆಯಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜೂನ್ 25 ರಿಂದ ಜುಲೈ 4ರವರೆಗೆ ನಡೆಯಲಿದೆ. ಇದಕ್ಕೆ ಸರ್ಕಾರ ಸಕಲ ವ್ಯವಸ್ಥೆ ಕೂಡ ಮಾಡಿಕೊಂಡಿದೆ. ಆದರೆ ಈ ಸಮಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬೇಕಾ? ಬೇಡ್ವಾ ಎಂಬ ವ್ಯಾಪಕ ಚರ್ಚೆ ಕೂಡ ನಡೆದಿದೆ. ಇದೀಗ ಕುಮಾರಸ್ವಾಮಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಬೇಕು ಎಂಬ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, “ಗುರುವಾರದಿಂದ ರಾಜ್ಯದಾದ್ಯಂತ SSLC ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿರ್ಧಾರದಿಂದ ತಕ್ಷಣವೇ ಹಿಂದೆ ಸರಿಯಬೇಕು. ಪರೀಕ್ಷೆ ನಡೆಸಲೇಬೇಕು ಎಂದಾದರೆ ಅಕ್ಟೋಬರ್ ತಿಂಗಳವರೆಗೆ ಕಾಯ್ದು ನಡೆಸಲಿ” ಎಂದು ಸೂಚನೆ ಕೊಟ್ಟಿದ್ದಾರೆ.

“ಕೊರೊನಾ ಸೋಂಕು ಏರುಗತಿಯಲ್ಲಿ ಸಾವಿನ ನಗಾರಿ ಬಾರಿಸುತ್ತಿದೆ. ಇಂತಹ ಆತಂಕದ ಸಂದರ್ಭದಲ್ಲಿ ಸುಮಾರು ಎಂಟು ಲಕ್ಷ SSLC ವಿದ್ಯಾರ್ಥಿಗಳು, ಪೋಷಕರು ಹಾಗೂ ಪರೀಕ್ಷಾ ಸಿಬ್ಬಂದಿ ಸೇರಿದಂತೆ 24 ಲಕ್ಷ ಮಂದಿಯ ಜೀವ ಮತ್ತು ಭವಿಷ್ಯದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ” ಎಂದಿದ್ದಾರೆ.

ಕೊರೊನಾ ಸೋಂಕು ಸಮುದಾಯ ಪ್ರಸರಣ ಭೀತಿಯ ಹಿನ್ನೆಲೆಯಲ್ಲಿ ನೆರೆಯ ತೆಲಂಗಾಣ ರಾಜ್ಯದಲ್ಲಿ SSLC ಪರೀಕ್ಷೆಯನ್ನು ರದ್ದುಪಡಿಸಿ ಉತ್ತೀರ್ಣ ಗೊಳಿಸಲಾಗಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರ ನಿರ್ಧಾರ ತಳೆಯಬಹುದು. ಪರೀಕ್ಷೆಗಳನ್ನು ನಡೆಸಲೇ ಬೇಕೆಂದರೆ ಅಕ್ಟೋಬರ್ ತಿಂಗಳವರೆಗೆ ಕಾಯಲಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

“ಏನಾದರೂ ಅವಘಡಗಳು ಸಂಭವಿಸಿದರೆ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡುತ್ತೇನೆ. ಸರ್ಕಾರ ಈ ಬಗ್ಗೆ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು” ಎಂದು ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *