ಸರ್ಜಾರ 35 ವರ್ಷದ ಸಿನಿಮಾ ಕೃಷಿಯನ್ನ ಶೃತಿ ಒಂದು ದಿನದಲ್ಲಿ ಹಾಳು ಮಾಡಿದಂತಾಗಿದೆ: ಜಗ್ಗೇಶ್

ಮಂಡ್ಯ: ನಟಿ ಶೃತಿ ಹರಿಹರನ್ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ತಕ್ಷಣವೇ ಪ್ರತಿಕ್ರಿಯೆ ನೀಡಬೇಕಿತ್ತು. ಅರ್ಜುನ್ ಸರ್ಜಾ ವಿಚಾರದಲ್ಲಿ ಶೃತಿ ಹರಿಹರನ್ ತಪ್ಪು ಮಾಡಿದ್ದಾರೆ. ಅರ್ಜುನ್ ಸರ್ಜಾ ಮಹಾನ್ ಸಾದ್ವಿ, ಸುಸಂಸ್ಕೃತ, ಏಕವಚನ ಮಾತನಾಡುವ ವ್ಯಕ್ತಿ ಅಲ್ಲ. ಡಾ.ರಾಜ್, ಡಾ.ವಿಷ್ಣು ಬಿಟ್ಟರೆ ಸರಳತೆ ಮೈಗೂಡಿಸಿಕೊಂಡಿರುವ ಜಂಟಲ್‍ಮ್ಯಾನ್. ಅರ್ಜುನ್ ಅವರ 35 ವರ್ಷದ ಸಿನಿಮಾ ಕೃಷಿಯನ್ನ ಶೃತಿ ಒಂದು ದಿನದಲ್ಲಿ ಹಾಳು ಮಾಡಿದಂತೆ ಆಗಿದೆ ಎಂದು ಜಗ್ಗೇಶ್ ಮೀಟೂ ಆರೋಪದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗ ಅನ್ನೋದು ಗಂಧರ್ವ ವಿದ್ಯೆ. ಇಲ್ಲಿಯ ಕಲಾವಿದರು ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕು. ಸಿನಿಮಾ ರಂಗ ಪ್ರವೇಶಿಸಿದ ಮಹಿಳೆಯರು ಸಾರ್ವಜನಿಕವಾಗಿ ನಟಿಸಬೇಕಾಗುತ್ತದೆ. ಪ್ರತಿಯೊಂದು ಪಾತ್ರದಲ್ಲಿಯೂ ಕಲಾವಿದರು ಪರಕಾಯ ಪ್ರವೇಶ ಮಾಡಬೇಕು. ನಾನು ಯಾವತ್ತೂ ಸ್ತ್ರೀಯರ ಪರವಾಗಿ ಇರುವಂತಹ ವ್ಯಕ್ತಿ. ನನಗೆ ಜನ್ಮ ನೀಡಿದ್ದು ತಾಯಿ ಎಂದರು.

ಇಂದು ತಂತ್ರಜ್ಞಾನ ಮುಂದುವರಿದಿದ್ದು ಎಲ್ಲರ ಕೈಯಲ್ಲೂ ಮೊಬೈಲ್ ಇದೆ. ಕೇವಲ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಮಾತ್ರ ಮೊಬೈಲ್ ಬಳಸಬೇಡಿ. ನಿಮಗೆ ಎಲ್ಲಿ ದೌರ್ಜನ್ಯ ಆಗುತ್ತೋ ಅಲ್ಲೇ ಲೈವ್ ವಿಡಿಯೋ ಮಾಡಿ ಮಾತನಾಡಿ. ಇಂತಹ ನಿರ್ದೇಶಕ ಅಥವಾ ಕಲಾವಿದ ಅಥವಾ ತಂತ್ರಜ್ಞರು ಹೀಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಜಗತ್ತಿಗೆ ತಿಳಿಸಿ. ಆನ್‍ಲೈನ್ ನಲ್ಲಿ ಪೊಲೀಸರಿಗೆ ದೂರು ಸಲ್ಲಿಸಿ. ಒಂದು ವೇಳೆ ನಿಮಗೆ ತುಂಬಾ ನೋವು ಆಗಿದ್ದಲ್ಲಿ ನಮಗೆ ಕಲಾವಿದರ ಸಂಘ, ವಾಣಿಜ್ಯ ಮಂಡಳಿ ಇದೆ. ಅಲ್ಲಿ ನಿಮ್ಮ ಸಮಸ್ಯೆಯನ್ನು ಹಿರಿಯರ ಮುಂದೆ ಹೇಳುವ ಅವಕಾಶ ಎಲ್ಲರಿಗೂ ಇದೆ. ಅಲ್ಲಿಯೂ ತುಂಬಾ ತೀಕ್ಷ್ಣವಾಗಿ ಕ್ರಮ ತೆಗೆದುಕೊಳ್ಳುತ್ತಾರೆ. ನಿಮಗೆ ಅಲ್ಲಿ ನಂಬಿಕೆ ಇಲ್ಲ ಅಂದಮೇಲೆ ಮಹಿಳಾ ಸಂಘಗಳು, ನ್ಯಾಯಾಲಯ, ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸಬಹುದು ಎಂದು ಸಲಹೆ ನೀಡಿದರು.

ಇಂದು ಮೀಟೂ ಆರೋಪ ಅರ್ಜುನ್ ಸರ್ಜಾರನ್ನು ಕೊಲೆ ಮಾಡಿದಂತಾಗಿದೆ. ಈ ಆಂದೋಲನಕ್ಕೆ ಇಂದು ರಾಜಕೀಯ ತಿರುವುಗಳನ್ನು ಸಹ ಪಡೆದುಕೊಳ್ಳುತ್ತಿದೆ. ಇನ್ನು ಬಹುಭಾಷಾ ನಟ ಪ್ರಕಾಶ್ ರೈ ಸಹ ಓರ್ವ ಜಂಟಲ್ ಮ್ಯಾನ್. ಅರ್ಜುನ್ ಸರ್ಜಾ ಸ್ಲಂನಿಂದ ಬಂದಿರೋದು ರೈ ದೇವಲೋಕದಿಂದ ಬಂದಿದ್ದಾರೆ. ಸಿಕ್ಕಿದ್ದೇ ಚಾನ್ಸ್ ಅಂತಾ ಬಾಯಿಗೆ ಬಂದ ಹಾಗೆ ಮಾತನಾಡೋದು ತಪ್ಪು ಎಂದು ಪ್ರಕಾಶ್ ರೈ ಕಾಲೆಳೆದ್ರು.

ದೌರ್ಜನ್ಯ ನಡೆದಾಗ ಪ್ರತಿಕ್ರಿಯೆ ನೀಡದೇ 20 ವರ್ಷದ ಹಿಂದೆ ನನ್ನ ಮೇಲೆ ಅತ್ಯಾಚಾರ ಆಯ್ತು. 10 ವರ್ಷದ ಹಿಂದೆ ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಅಂತಾ ಇಂದು ಹೇಳಿದ್ರೆ ಇದು ಸರೀನಾ ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತಿದೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *