ಶ್ರೀರಂಗಪಟ್ಟಣ ಮಸೀದಿ ವಿವಾದ – ಹಿಂದೂ, ಮುಸ್ಲಿಮರ ವಾದ ಏನು?

ಮಂಡ್ಯ: ಕಾಶಿಯ ಜ್ಞಾನವಾಪಿ ಮಸೀದಿ ವಿವಾದ ಆರಂಭವಾದ ಬೆನ್ನಲ್ಲೇ ಈಗ ಶ್ರೀರಂಗಪಟ್ಟಣ ಮಸೀದಿ ವಿವಾದ ಎದ್ದಿದೆ. ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಅಲ್ಲ, ಹನುಮಾನ್ ಮಂದಿರ ಅಂತ ಪಟ್ಟು ಹಿಡಿದಿರುವ ಹಿಂದೂ ಸಂಘಟನೆಗಳು ಇಂದು `ಶ್ರೀರಂಗಪಟ್ಟಣ ಚಲೋ’ ಹಮ್ಮಿಕೊಂಡಿವೆ.

ಇತ್ತ ಮುಸ್ಲಿಂ ಸಂಘಟನೆಗಳು ಈ ಮಸೀದಿಯನ್ನು ಟಿಪ್ಪು ಸುಲ್ತಾನ್ ನಿರ್ಮಿಸಿದ್ದಾನೆ. ದೇವಸ್ಥಾನವನ್ನು ನಾಶ ಮಾಡಿ ಮಸೀದಿ ನಿರ್ಮಾಣ ಮಾಡಿಲ್ಲ ಎಂದು ವಾದಿಸುತ್ತಿವೆ.

ಹಿಂದೂ ಪರರ ವಾದವೇನು?
1659ರಲ್ಲಿ ವಿಜಯನಗರದ ಸಾಮ್ರಾಜ್ಯವಿತ್ತು. ದೊಡ್ಡ ದೇವರಾಜ ಒಡೆಯರ್ ಅವಧಿಯಲ್ಲಿ ದೇವಸ್ಥಾನವೊಂದನ್ನು ಕಟ್ಟಲಾಗಿದೆ. ಬಾಗಿಲು ವೆಂಕಟರಮಣ ದೇವಸ್ಥಾನ ಎಂದು ದೇಗುಲದ ಹೆಸರು ಇತ್ತು. ವೆಂಕಟೇಶ್ವರಸ್ವಾಮಿ, ಆಂಜನೇಯಸ್ವಾಮಿ ಅಲ್ಲಿನ ಪ್ರಧಾನ ದೇವರುಗಳು. ಮಾಧ್ವ ಯತಿಗಳು ಬಂದಾಗ ಉಳಿದುಕೊಳ್ಳಲು ಈ ದೇವಸ್ಥಾನ ಇತ್ತು. 1784ರಲ್ಲಿ ಟಿಪ್ಪು ಈ ದೇವಸ್ಥಾನ ಕೆಡವಿ ಅಲ್ಲಿ ಮಸೀದಿ ಕಟ್ಟಿದ್ದಾನೆ. ಸಾಫ್ಟ್ ಟಾರ್ಗೆಟ್ ರೂಪದಲ್ಲಿ ಈ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಲಾಯ್ತು ಎಂದು ಆರೋಪಿಸಲಾಗುತ್ತಿದೆ. ಇದನ್ನೂ ಓದಿ: ಇಂದು ಹಿಂದೂ ಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋ – 144 ಸೆಕ್ಷನ್ ಜಾರಿ 

ಜಾಮಿಯಾ ಮಸೀದಿ.. ಟಿಪ್ಪು ಪರರ ವಾದವೇನು..?
ದೇವಸ್ಥಾನ ಇದ್ದಿದ್ದು ಸತ್ಯ, ರಾಜ್ಯ ರಕ್ಷಣೆಗಾಗಿ ವಾಚ್ ಟವರ್ ಕಟ್ಟಬೇಕಾಗಿತ್ತು. ಶತ್ರುಗಳಿಗೆ ಗೊತ್ತಾಗದಿರಲಿ ಎಂದು ಮಸೀದಿ ರೂಪದಲ್ಲಿ ವಾಚ್ ಟವರ್ ನಿರ್ಮಾಣ ಮಾಡಲಾಗಿತ್ತು. ಗೋಪುರದ ತುದಿಯಲ್ಲಿ ನಿಂತರೆ 40 ಕಿ.ಮೀ. ದೂರದ ಮಳವಳ್ಳಿಯೂ ಕಾಣುತ್ತೆ. ಟಿಪ್ಪು ದೇವಸ್ಥಾನ ನಾಶ ಮಾಡಲಿಲ್ಲ. ಅಲ್ಲಿದ್ದ ದೇವಸ್ಥಾನವನ್ನು ಸ್ಥಳಾಂತರ ಮಾಡಿದ್ದ. ಶ್ರೀರಂಗಪಟ್ಟಣದ ಕ್ಷಣಾಂಬಿಕಾ ದೇವಿ ದೇಗುಲದ ಆವರಣದೊಳಗೆ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ಆಗಿದೆ. ದೇವಾಲಯ ನಾಶ ಮಾಡುವ ಉದ್ದೇಶ ಇದ್ದಿದ್ದರೆ ಮೂರ್ತಿಯನ್ನು ಯಾಕೆ ಸ್ಥಳಾಂತರ ಮಾಡಬೇಕಿತ್ತು ದೇವಾಲಯದ ಕಂಬಗಳನ್ನು ಎಲ್ಲರಿಗೂ ತಿಳಿಯುವಂತೆ ಹೊರಗಡೆ ಯಾಕೆ ಬಿಡುತ್ತಿದ್ದ ಎಂದು ಪ್ರಶ್ನೆ ಕೇಳಿದ್ದಾರೆ.

Comments

Leave a Reply

Your email address will not be published. Required fields are marked *