ಸರ್ಕಾರ ಪತನದ ಮುನ್ಸೂಚನೆ ನೀಡಿದ್ರಾ ಶ್ರೀರಾಮುಲು

ಗದಗ: ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿ ಇನ್ನು ಕೇವಲ ಮೂರು ತಿಂಗಳು ಮಾತ್ರನಾ ಅನ್ನೋ ಪ್ರಶ್ನೆ ರಾಜ್ಯದ ಜನತೆಯಲ್ಲಿ ಕಾಡುತ್ತಿದೆ.

ಯಾಕಂದರೆ ಗದಗದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು ನಾಳೆ ಏನಾದರು ಆದ್ರೆ ನಾನು ಆರೋಗ್ಯ ಮಂತ್ರಿಯಾಗಿರಲ್ಲ, 3 ತಿಂಗಳಲ್ಲಿ ಸರ್ಕಾರದ ಅನುದಾನ ಎಷ್ಟಿದೆಯೋ ಅಷ್ಟನ್ನೂ ಬಳಸಿ ಅಂತಾ ಅಧಿಕಾರಿಗಳಿಗೆ ಆದೇಶ ಹೊರಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ನನ್ನ ರಾಜಕೀಯದಲ್ಲೂ ಕೂಡ ಸುಧಾರಣೆ ಆಗುತ್ತಿಲ್ಲ. ಎಲ್ಲೋ ಒಂದು ಕಡೆ ವ್ಯವಸ್ಥೆ ಕೆಟ್ಟುಹೋಗಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಸ್ವತಃ ರಾಮುಲು ಅವರೇ 3 ತಿಂಗಳ ಬಳಿಕ ಸರ್ಕಾರ ಪತನದ ಮುನ್ಸೂಚನೆ ನೀಡಿದ್ದಾರಾ ಅನ್ನೋ ಪ್ರಶ್ನೆ ಎಲ್ಲರ ತಲೆಕೆಡಿಸಿದೆ. ಈ ಹೇಳಿಕೆ ರಾಜಕೀಯ ಪಾಳಯದಲ್ಲಿ ತಲ್ಲಣ ಮೂಡಿಸಿದೆ.

ನಾವು ಯಾವುದೇ ಕೆಲಸ ಮಾಡಲಿ ಭಗವಂತ ನೋಡುವ ಕೆಲಸ ಮಾಡಬೇಕು. ಮನುಷ್ಯರು ನೋಡೋದು ಬೇಕಾಗಿಲ್ಲ. ಇಲ್ಲಿ ಯಾರೂ ಶಾಶ್ವತ ಅಲ್ಲ. ರಾಜ್ಯದಲ್ಲಿ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞರು ಹಾಗೂ ವೈದ್ಯರ ಕೊರತೆಯಿದೆ. ಆ ಕೊರತೆಯನ್ನು ನೀಗಿಸುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರಿ ಆಸ್ಪತ್ರೆಗಳ ಅನುದಾನದಲ್ಲಿ 20 ಕೋಟಿ ರೂ. ಉಳಿದಿದೆ. ಇದನ್ನು ಮೂರು ತಿಂಗಳೊಳಗೆ ಖರ್ಚು ಮಾಡಿ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 2 ಸಾವಿರ ಕೋಟಿ ಅನುದಾನವನ್ನು ಕೊಡುತ್ತಾರೆ ಎಂದಾದರೆ ಅಧಿಕಾರಿಗಳು ಅದನ್ನು ಎನ್‌ಆರ್‌ಎಚ್‌ಎಂನಲ್ಲಿ ಖರ್ಚು ಮಾಡಿದರೆ ಮಾತ್ರ ಪೂರ್ಣ ಅನುದಾನವನ್ನು ಕೇಳಲು ಸಾಧ್ಯವಾಗುತ್ತೆ ಎಂದು ಶ್ರೀರಾಮುಲು ತಿಳಿಸಿದರು.

ಹಾಗೆಯೇ ಒಂದು ಜಿಲ್ಲೆಯಲ್ಲಿ 20 ಕೋಟಿವರೆಗೆ ಹಣ ಹಾಗೆಯೇ ಉಳಿದಿದೆ ಎಂದರೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಎಷ್ಟೆಷ್ಟು ಉಳಿದಿರಬಹುದು? ಮೂರು ತಿಂಗಳೊಳಗೆ ಈ ಹಣವನ್ನು ಖರ್ಚು ಮಾಡಿ. ಆಸ್ಪತ್ರೆಗಳಿಗೆ ಆಧುನಿಕ ತಂತ್ರಜ್ಞಾನ ಹೊಂದಿರುವ ಯಂತ್ರಗಳನ್ನು ತೆಗೆದುಕೊಂಡು ಬನ್ನಿ, ಅಭಿವೃದ್ಧಿ ಮಾಡಿ ನಾವೇನು ಬೇಡ ಅನ್ನೋದಿಲ್ಲ. ನಿಮಗೆ ಪೂರ್ಣ ಸ್ವತಂತ್ರ್ಯ ನೀಡುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲರೂ ಎಲ್ಲಾ ರೀತಿಯಲ್ಲೂ ಸುಧಾರಣೆ ಆಗಬೇಕು. ನಾನೂ ಕೂಡ ಸುಧಾರಣೆ ಆಗಬೇಕು, ಆದರೆ ರಾಜಕೀಯ ಒತ್ತಡ ಇರುವುದರಿಂದ ನಾನು ಸುಧಾರಣೆ ಆಗಲು ಆಗುತ್ತಿಲ್ಲ. ಒಂದು ಕಡೆ ವ್ಯವಸ್ಥೆ ಕೆಟ್ಟುಹೋಗಿದೆ ಅದನ್ನು ಸರಿಪಡಿಸಬೇಕಾದರೆ, ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *