ಬಳ್ಳಾರಿ: ಲೋಕಸಭಾ ಉಪಚುನಾಣೆಯಲ್ಲಿ ಬಳ್ಳಾರಿಯಲ್ಲಿ ಈಗ ಜಾತಿ ಜಗಳ ಆರಂಭವಾಗಿದೆ. ಗೌಡ ಜಾತಿಯ ಕುರಿತು ಶಾಸಕ ಬಿ.ಶ್ರೀರಾಮುಲು ಅವರು ಸಂಸದ ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆದರೆ, ಮತ್ತೊಂದೆಡೆ ಶ್ರೀರಾಮುಲು ಅವರು ನಾಯಕ ಜನಾಂಗದವರೇ ಅಲ್ಲ ಅಂತಾ ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಬಿ.ಶ್ರೀರಾಮುಲು ಕರ್ನಾಟಕದವರೇ ಅಲ್ಲ. ಅವರು ಆಂಧ್ರ ಪ್ರದೇಶದ ಬೊಯಸ್ ಜನಾಂಗದವರು. ರಾಜಕೀಯ ಹಿತಾಸಕ್ತಿಗೆ ತಾವು ನಾಯಕ ಜನಾಂಗವರು ಅಂತಾ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾದ ಮಾತು. ಅವರು ಸುಳ್ಳು ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಶ್ರೀರಾಮುಲು ಒಬ್ಬ ಮೋಸಗಾರ, ತಗಾದೆಕೋರ ವ್ಯಕ್ತಿ. ರಾಜ್ಯದಲ್ಲಿ ಕೇವಲ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಬಿಜೆಪಿ ಸೋಲಲು ಶ್ರೀರಾಮುಲು ಒಬ್ಬರೇ ಸಾಕು. ಅವರು ಅಭಿವೃದ್ಧಿ ಕಾರ್ಯಬಿಟ್ಟು, ಮಾಟ ಮಂತ್ರ ಮಾಡುತ್ತಾರೆ ಎಂದ ಅವರು, ಬಳ್ಳಾರಿ ಉಪ ಚುನಾವಣೆಯಲ್ಲಿ ನಾನು ಜಯಗಳಿಸಿದರೆ ಸ್ವಗ್ರಾಮದಿಂದಲೇ ನಿತ್ಯವೂ ಇಲ್ಲಿಗೆ ಬಂದು ಜಿಲ್ಲೆಯ ಜನರ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರಿಂದ ತಿಪ್ಪೇಸ್ವಾಮಿ ಟಿಕೆಟ್ ಕಳೆದುಕೊಂಡಿದ್ದರು. ಹೀಗಾಗಿ ತಿಪ್ಪೇಸ್ವಾಮಿ ಅವರು ಬಿಜೆಪಿ ವಿರುದ್ಧವೇ ಕಿಡಿಕಾರುತ್ತಿದ್ದು, ಈಗ ಬಳ್ಳಾರಿ ಉಪಚುನಾವಣೆ ಸ್ಪರ್ಧೆಗೆ ಇಳಿದಿದ್ದಾರೆ. ಈ ಮೂಲಕ ಬಿಜೆಪಿ ವೋಟ್ ಬ್ಯಾಂಕ್ ಒಡೆಯಲೆಂದೇ ಅವರು ಕಣಕ್ಕೆ ಇಳಿದಿದ್ದಾರೆ ಎನ್ನಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply