ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ ಶ್ರೀರಾಮುಲು

– ಲೋಪವೆಸಗುವ ವೈದ್ಯರಿಗೆ ಖಡಕ್ ವಾರ್ನಿಂಗ್

ಬಳ್ಳಾರಿ: ಸಮಸ್ಯೆ ಬಗೆಹರಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡಲಿದ್ದೇನೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಇಂದು ಬಳ್ಳಾರಿಯಲ್ಲಿ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದೇನೆ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಾಸ್ತವ್ಯ ಮಾಡುವ ಮೂಲಕ ಶೀಘ್ರದಲ್ಲೇ ಈ ಬಗ್ಗೆ ಚರ್ಚೆ ಮಾಡಿ ಈ ‘ಆಸ್ಪತ್ರೆ ವಾಸ್ತವ್ಯ’ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ಹೇಳಿದರು.

ಅಲ್ಲದೇ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಗಡುವು ನೀಡಿರುವ ಆರೋಗ್ಯ ಸಚಿವರು, ಹದಿನೈದು ದಿನಗಳ ಕಾಲಮಿತಿಯಲ್ಲಿ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು, ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿ ಡಯಾಲಿಸಿಸ್ ಘಟಕದಲ್ಲಿ ಮಗು ಸಾವಿನಪ್ಪಿದ ಪ್ರಕರಣದ ಬಗ್ಗೆ ಈಗಾಗಲೇ ನಾನು ವರದಿ ಕೇಳಿರುವೆ. ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಸರ್ಜನ್ ಅವರ ಕರ್ತವ್ಯ ಲೋಪ ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳುವೆ ಎಂದರು.

ಆಸ್ಪತ್ರೆಯ ಸೇವೆಗಳನ್ನು ನೀಡುವ ವಿಚಾರದಲ್ಲಿ ತಾಂತ್ರಿಕ ತೊಂದರೆ ನೆಪ ಹೇಳಬಾರದು, ಸೇವೆ ಒದಗಿಸುವಲ್ಲಿ ಏನೇ ಲೋಪ ಇದ್ದರೂ ಅದನ್ನು ಸರಿಪಡಿಸುವ ಜವಾಬ್ದಾರಿ ಸಂಬಂಧಿಸಿರುವ ಸಿಬ್ಬಂದಿಗಳ ಮೇಲಿದೆ. ಯಾವುದೇ ಕಾರಣಕ್ಕೂ ನೆಪಗಳನ್ನು ಕೇಳುವುದಿಲ್ಲ ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.

ಇದೇ ವೇಳೆ ಹಂಪಿ ಉತ್ಸವದ ಬಗ್ಗೆ ಮಾತನಾಡಿ, ಸಿಎಂ ಜೊತೆ ಚರ್ಚೆ ಮಾಡಿ ಶೀಘ್ರದಲ್ಲೇ ಅಧಿಕಾರಿಗಳು ಶಾಸಕರ ಸಭೆ ಕರೆಯುತ್ತೇನೆ. ದಿನಾಂಕ ನಿಗದಿ ಮಾಡಲಾಗುವುದು, ಮೈಸೂರು ದಸರಾದಂತೆ ಹಂಪಿ ಉತ್ಸವಕ್ಕೂ ನಿರ್ದಿಷ್ಟ ದಿನಾಂಕ ನಿಗದಿಪಡಿಸುವೆ ಎಂದು ಶ್ರೀರಾಮುಲು ತಿಳಿಸಿದರು.

Comments

Leave a Reply

Your email address will not be published. Required fields are marked *