ಭ್ರಷ್ಟಾಚಾರದಡಿ ಬಂಧನಕ್ಕೊಳಗಾಗಿದ್ದ ಶೃಂಗೇರಿ ತಹಶೀಲ್ದಾರ್ ಡ್ರೈವರ್ ಸೂಸೈಡ್

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ತಹಶೀಲ್ದಾರ್ ಅಂಬುಜಾ ಅವರ ಕಾರು ಚಾಲಕ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆತ್ಮಹತ್ಯೆಗೆ ಶರಣಾದ ಚಾಲಕನನ್ನ ವಿಜೇತ್(26) ಎಂದು ಗುರುತಿಸಲಾಗಿದೆ. ಶೃಂಗೇರಿ ತಾಲೂಕಿನ ಹೆಗ್ತೂರು ಮೂಲದ ವಿಜೇತ್ ತಮ್ಮ ಮನೆಯ ಸಮೀಪದ ಅಡಿಕೆ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈತ ಅವಿವಾಹಿತನಾಗಿದ್ದು, ಇತ್ತೀಚೆಗಷ್ಟೆ ಆತನ ತಂಗಿ ಮದುವೆ ನಿಶ್ಚಯವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕಳೆದ 20 ದಿನಗಳ ಹಿಂದಷ್ಟೆ ಶೃಂಗೇರಿ ತಹಶೀಲ್ದಾರ್ ಅಂಬುಜಾ ಕೂಡ ಭ್ರಷ್ಟಾಚಾರದಡಿ ಬಂಧನಕ್ಕೊಳಗಾಗಿದ್ದರು. ಇದೇ ಜ.6ರಂದು ಹಕ್ಕುಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಂಬುಜಾ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ಎಸಿಬಿ ಬಲೆಗೆ ಬಿದ್ದಿದ್ದರು. ಹಕ್ಕುಪತ್ರ ನೀಡಲು ಶೃಂಗೇರಿಯ ಪ್ರವಾಸಿ ಮಂದಿರದಲ್ಲಿ 25 ಸಾವಿರ ಲಂಚ ಪಡೆದುಕೊಳ್ಳುವಾಗ ಗ್ರಾಮ ಲೆಕ್ಕಾಧಿಕಾರಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದಿದ್ದರು.

ಪ್ರಕರಣ ಸಂಬಂಧ ಅಂಬುಜಾ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪರನ್ನ ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಇದಾದ ಸುಮಾರು 25 ದಿನಗಳ ಬಳಿಕ ತಹಶೀಲ್ದಾರ್ ಡ್ರೈವರ್ ವಿಜೇತ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಿಜೇತ್ ಸಾವಿಗೆ ಶೃಂಗೇರಿ ತಹಶೀಲ್ದಾರ್ ಕಚೇರಿಯಲ್ಲಿನ ಬ್ರೋಕರ್ ಗಳ ಹಾವಳಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಗಾಡಿ ಟೋಯಿಂಗ್ ಮಾಡ್ತಿದ್ದ ASIಗೆ ಕಲ್ಲೇಟು- ವಿಕಲಚೇತನ ಮಹಿಳೆಗೆ ಬೂಟಿನಿಂದ ಒದ್ದ ನಾರಾಯಣ್

ಕಳೆದೊಂದು ತಿಂಗಳಿಂದ ಶೃಂಗೇರಿ ತಾಲೂಕು ಕಚೇರಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಬೆಳಕಿಗೆ ಬಂದಿತ್ತು. ತಹಶೀಲ್ದಾರ್ ಕಚೇರಿಯಲ್ಲಿ ಬ್ರೋಕರ್ ಹಾವಳಿಯೂ ಮಿತಿಮೀರಿತ್ತು. ತಹಶೀಲ್ದಾರ್ ಕಚೇರಿಯಲ್ಲಿನ ಬ್ರೋಕರ್ ಗಳ ಹಾವಳಿಯಿಂದಲೇ ವಿಜೇತ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದು, ಈ ಸಾವಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ವಿಜೇತ್ ಸಾವಿಗೆ ತಹಶೀಲ್ದಾರ್ ಅಂಬುಜಾ ಹಾಗೂ ಹಿರಿಯ ಅಧಿಕಾರಿಗಳೇ ನೇರಹೊಣೆ. ಹಾಗಾಗಿ ಪ್ರಕರಣದ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿ ಸ್ಥಳೀಯರು ರಾತ್ರೋರಾತ್ರಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಮಾಯಕನ ಸಾವಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *