ಸಂಭ್ರಮದಿಂದ ನಡೆದ ಮೈಲಾರಲಿಂಗೇಶ್ವರನ ಜಾತ್ರೆ – ಭಕ್ತರ ಸಾಗರವೋ ಸಾಗರ

ಯಾದಗಿರಿ: ಹೈದರಾಬಾದ್ ಕರ್ನಾಟಕ ಭಾಗದಲ್ಲಿಯೇ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ಸೋಮವಾರ ಅದ್ಧೂರಿಯಾಗಿ ಜರುಗಿದೆ.

ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ಸಂಭ್ರಮದಿಂದ ನಡೆದಿದ್ದು, ಲಕ್ಷಾಂತರ ಭಕ್ತರು ಆಗಮಿಸಿ ತಮ್ಮ ಹರಕೆ ತೀರಿಸಿದ್ದಾರೆ. ಮಹಿಳೆಯರು ಸೇರಿದಂತೆ ಅಪಾರ ಪ್ರಮಾಣದ ಭಕ್ತ ಸಾಗರ ಹರಿದುಬಂದಿತ್ತು. ಜನ ಜಂಗುಳಿಯ ನಡುವೆ ಮೈಲಾರಲಿಂಗೇಶ್ವರ ಪಲ್ಲಕ್ಕಿಯನ್ನು ಪುಣ್ಯ ಸ್ನಾನಕ್ಕಾಗಿ ಹೊನ್ನಕೆರೆಗೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು.

ಭಕ್ತರು ಬಂಡಾರ ದೇವರಿಗೆ ಸಮರ್ಪಿಸಿ ಮೈಲಾರಲಿಂಗೇಶ್ವರಿಗೆ ಜಯ ಘೋಷ ಹಾಕಿ ಸಂಭ್ರಮ ಪಟ್ಟಿದ್ದಾರೆ. ಜಿಲ್ಲಾಡಳಿತ ಮಲ್ಲಯ್ಯನ ಪಲ್ಲಕ್ಕಿ ಮೇಲೆ ಕುರಿ ಮರಿ ಎಸೆಯುವುದನ್ನು ನಿಷೇಧ ಮಾಡಿತ್ತು. ಹರಕೆ ಹೊತ್ತ ಭಕ್ತರು ಹಾಗೂ ಕುರಿ ಸಾಕಾಣಿಕೆದಾರರು ಮಲ್ಲಯ್ಯನ ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನು ಎಸೆದು ಭಕ್ತಿ ಪರಕಾಷ್ಠೆ ಮೆರೆದಿದ್ದಾರೆ ಎಂದು ಭಕ್ತ ರಾಮನಗೌಡ ಹೇಳಿದ್ದಾರೆ.

ಕೆಲ ಭಕ್ತರು ಮೈಲಾರಲಿಂಗೇಶ್ವರನಿಗೆ ಬಂಡಾರ, ಜೋಳದ ತೆನೆ, ಹಾಗೂ ಕುರಿ ಉಣ್ಣಿ ದೇವರಿಗೆ ಅರ್ಪಿಸಿ ದೇವರ ಕೃಪೆಗೆ ಪಾತ್ರರಾದರು. ಈ ವೇಳೆ ಪೊಲೀಸರ ಹಾಗೂ ಅಧಿಕಾರಿಗಳ ಕಣ್ಣು ತಪ್ಪಿಸಿ ಭಕ್ತರು ಪಲ್ಲಕ್ಕಿ ಮೇಲೆ ಒಂದೆರಡು ಕುರಿಮರಿಗಳನ್ನು ಎಸೆದರು. ಭಕ್ತ ಸಮೂಹ ಹೆಚ್ಚಿಗೆ ಸೇರಿದ್ದರಿಂದ ಪಲ್ಲಕ್ಕಿ ಮೆರವಣಿಗೆ ತೆರಳಲು ದಾರಿ ಮಾಡಿಕೊಡಲು ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಬೀಸಿದರು ಎಂದು ಭಕ್ತ ಶಿವಕುಮಾರ್ ತಿಳಿಸಿದ್ದಾರೆ.

ಕುರಿ ಎಸೆಯುವುದು ಏಕೆ?
ಪಲ್ಲಕ್ಕಿ ಮೇಲೆ ಎಸೆಯಲು ತೆಗೆದುಕೊಂಡು ಬಂದಿದ್ದ 895ಕ್ಕೂ ಹೆಚ್ಚು ಕುರಿ ಮರಿಗಳನ್ನು ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದಿದ್ದರು. ಮೈಲಾರಲಿಂಗೇಶ್ವರ ಪಲ್ಲಕಿ ಮೇಲೆ ಗಂಗಾ ಸ್ನಾನಕ್ಕೆ ಹೊಗುತ್ತಿದ್ದಾಗ ಪಲ್ಲಕಿ ಮೇಲೆ ಕುರಿಗಳನ್ನು ಎಸೆದ್ರೆ, ಕುರಿಗಳಿಗೆ ಯಾವುದೇ ರೋಗಗಳು ಬರುವುದಿಲ್ಲ ಹಾಗೂ ವಂಶ ವೃದ್ಧಿಯಾಗುತ್ತದೆ. ದೇವರಿಗೆ ಕುರಿಗಳನ್ನು ಸಲ್ಲಿಸಿದರೆ ಮಲ್ಲಯ್ಯ ಹರಕೆ ಈಡೇರಿಸುತ್ತಾನೆ ಎಂದು ಭಕ್ತರ ನಂಬಿಕೆಯಾಗಿದೆ.

ಪುರಾತನ ಕಾಲದಿಂದ ಮಕರ ಸಂಕ್ರಮಣ ಹಬ್ಬದ ದಿನ ಮಲ್ಲಯ್ಯನ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲಿ ನೋಡಿದರೂ ಭಕ್ತ ಸಾಗರ ಕಂಡು ಬಂದಿದ್ದು, ದೇಗುಲದ ಸುತ್ತಲಿನ ಗುಡ್ಡದ ಮೇಲೆ ಕುಳಿತ ಭಕ್ತರು ಮೈಲಾರಲಿಂಗೇಶ್ವರನಿಗೆ ಜಯ ಘೋಷ ಹಾಕಿದ್ದಾರೆ. ಜಾತ್ರೆಗೆ ತೆಲಂಗಾಣ, ಆಂಧ್ರ, ಮಹರಾಷ್ಟ್ರ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತ ಸಮೂಹ ಹರಿದು ಬಂದು ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಭಾಗವಹಿಸಿ ಮಲ್ಲಯ್ಯನ ದರ್ಶನ ಪಡೆದು ಪುನೀತರಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *