ಪ್ರಧಾನಿ ಮೋದಿ ಟ್ವೀಟ್‍ನಿಂದ ಪ್ರೀತಿ ಶುರು – ಭಾರತೀಯ ವರನನ್ನು ವರಿಸಿದ ಶ್ರೀಲಂಕಾ ವಧು

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ನಿಂದಾಗಿ ಪ್ರೇಮಾಂಕರುವಾಗಿ ಭಾರತ ಮತ್ತು ಶ್ರೀಲಂಕಾದ ಜೋಡಿಯೊಂದು ಸಪ್ತಪದಿ ತುಳಿದಿದೆ.

ಶ್ರೀಲಂಕಾ ಯುವತಿ ಹಂಸಿನಿ ಎದಿರೀಸಿಂಘೆ(25) ಪಂಜಾಬ್ ನ ಕುಚೋರ್ದ್ ಗ್ರಾಮದ ನಿವಾಸಿ ಗೋವಿಂದ್ ಮಹೇಶ್ವರಿ(26) ಫೆಬ್ರವರಿ 10 ರಂದು ಮದುವೆಯಾಗಿದ್ದಾರೆ. ಮಧ್ಯ ಪ್ರದೇಶದ ಮಂದಸೋರ್ ನಲ್ಲಿ ಈ ವಿಶೇಷ ಮದುವೆ ನಡೆದಿದೆ.

ಪ್ರೀತಿ ಹುಟ್ಟಿದ್ದು ಹೇಗೆ?
ಪ್ರಧಾನಿ ಮೋದಿ ಅವರು 2015ರಲ್ಲಿ ಒಂದು ಟ್ವೀಟ್ ಮಾಡಿದ್ದರು. ಈ ಟ್ವೀಟನ್ನು ಗೋವಿಂದ್ ಲೈಕ್ ಮಾಡಿದ್ದರು. ಇದೇ ಟ್ವೀಟ್ ಅನ್ನು ಹಂಸಿನಿ ಸಹ ಲೈಕ್ ಮಾಡಿದ್ದಾರೆ. ಬಳಿಕ ಗೋವಿಂದ್ ಹಂಸಿನಿಯನ್ನು ಟ್ವೀಟ್ ಮೂಲಕ ಹಿಂಬಾಲಿಸಿದ್ದು, ಅಂದಿನಿಂದಲೂ ಅವರಿಬ್ಬರು ಸ್ನೇಹಿತರಾದರು. ದಿನಕಳೆದಂತೆ ಪರಸ್ಪರ ಪ್ರೀತಿಸುತ್ತಿದ್ದು, ಎರಡು ವರ್ಷಗಳ ಕಾಲ ಮೆಸೇಜ್ ಮತ್ತು ವಿಡಿಯೋ ಮೂಲಕ ಇಬ್ಬರು ಸಂವಹನ ಮಾಡುತ್ತಿದ್ದರು. ಕೊನೆಗೆ ಈ ಜೋಡಿ 2017ರಲ್ಲಿ ಪರಸ್ಪರ ಭೇಟಿಯಾಗಿದ್ದರು.

ಹಂಸಿನಿ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿಯಲು ಫಿಸಿಯೋಥೆರಪಿ ಅಧ್ಯಯನ ಮಾಡಲು ಭಾರತಕ್ಕೆ ಬಂದಿದ್ದರು. ಇತ್ತ ಗೋವಿಂದ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದರು. ಇಬ್ಬರು ತಮ್ಮ ತಮ್ಮ ಕುಟುಂಬಕ್ಕೆ ಪ್ರೀತಿಯ ವಿಚಾರವನ್ನು ತಿಳಿಸಿದ್ದರು. ಕುಟುಂಬದವರು ಸಮ್ಮತಿ ಸೂಚಿದ ನಂತರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

“ನನ್ನ ಮಗಳು ಉನ್ನತ ಶಿಕ್ಷಣಕ್ಕಾಗಿ ಭಾರತಕ್ಕೆ ಬಂದಿದ್ದಳು. ಬಳಿಕ ಭಾರತೀಯ ಹುಡುಗನನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿದು ಇಬ್ಬರನ್ನು ಶ್ರೀಲಂಕಾಕ್ಕೆ ಕರೆದುಕೊಂಡು ಬಂದೆವು. ಹುಡುಗ ಕೆಲವು ತಿಂಗಳು ಕಾಲ ನಮ್ಮ ಜೊತೆಯೇ ಇದ್ದರು. ದಿನಕಳೆದಂತೆ ಅವರನ್ನು ಇಷ್ಟಪಡಲು ಆರಂಭಿಸಿದ್ದೆವು. ನಂತರ ಅವರಿಬ್ಬರ ಪ್ರೀತಿಗೆ ಒಪ್ಪಿಗೆ ನೀಡಿದೆವು. ಭಾರತೀಯ ಹುಡುಗನನ್ನು ನಮ್ಮ ಮಗಳು ಆಯ್ಕೆ ಮಾಡಿಕೊಂಡಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಎಂದು ಹಂಸಿನಿ ಅವರ ತಂದೆ ಹೇಳಿದ್ದಾರೆ.

“ನಾವಿಬ್ಬರು ವಿಭಿನ್ನ ಸಂಸ್ಕೃತಿಗಳಿಗೆ ಸೇರಿದವರಾಗಿದ್ದೆವು. ಆದರೆ ನಾವು ಪರಸ್ಪರ ಪ್ರೀತಿಸುತ್ತೇವೆ. ಹೀಗಾಗಿ ನಮ್ಮ ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದೇವೆ ಎಂದು ಹಂಸಿನಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *