ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟಕ್ಕೆ 160 ಬಲಿ – 10 ದಿನದ ಮೊದಲೇ ಸಿಕ್ಕಿತ್ತು ಸುಳಿವು

ಕೊಲಂಬೋ: ದೇಶದಲ್ಲಿ ಬಾಂಬ್ ದಾಳಿ ನಡೆಯುವ 10 ದಿನದ ಮೊದಲೇ ಶ್ರೀಲಂಕಾ ಪೊಲೀಸ್ ಮುಖ್ಯಸ್ಥರು ದೇಶದ ವಿವಿಧೆಡೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದರು.

ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಪುನೀತ್ ಜಯಸುಂದರ ಅವರು ಏ.11 ರಂದು ಎಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಹಂಚಿಕೊಂಡು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು ಎಂಬುದಾಗಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

“ವಿದೇಶಿ ಗುಪ್ತಚರ ಇಲಾಖೆಯೊಂದು ಶ್ರೀಲಂಕಾದಲ್ಲಿ ನ್ಯಾಷನಲ್ ಥೌಹೀತ್ ಜಮಾತ್ (ಎನ್‍ಟಿಜೆ) ಸಂಘಟನೆ ಸ್ಫೋಟ ನಡೆಸಲು ಸಿದ್ಧತೆ ನಡೆಸಿದೆ. ಅಲ್ಲದೇ ಚರ್ಚ್‍ಗಳು ಹಾಗೂ ಭಾರತದ ಧೂತವಾಸ ಕಚೇರಿಯೇ ಉಗ್ರರ ಗುರಿ” ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ದಾಳಿಯ ಬಗ್ಗೆ 10 ದಿನಗಳ ಮುನ್ನವೇ ಮಾಹಿತಿ ಲಭಿಸಿದ್ದರೂ ಕೃತ್ಯ ತಡೆಯಲು ಶ್ರೀಲಂಕಾ ವಿಫಲವಾಗಿದೆ.

ಎನ್‍ಟಿಜೆ ಸಂಘಟನೆ ಮೂಲಭೂತವಾದಿ ಮುಸ್ಲಿಂ ಸಂಘಟನೆಯಯಾಗಿದ್ದು, ಕಳೆದ ವರ್ಷ ಈ ಸಂಘಟನೆ ದೇಶದಲ್ಲಿ ಕಾರ್ಯಪ್ರವೃತ್ತಿ ಆಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಸಂಘಟನೆ ಹೆಸರು ಬೆಳಕಿಗೆ ಬಂದಿತ್ತು.

ಇಂದು ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕನಿಷ್ಟ 160 ಮಂದಿ ಮೃತ ಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಕೊಲಂಬೋದ ಪ್ರಮುಖ ಚರ್ಚ್ ಮೂರು ಚರ್ಚ್ ಹಾಗೂ 2 ಹೋಟೆಲ್ ಗಳ ಮೇಲೆ ನಡೆದ ದಾಳಿ ಇದಾಗಿದೆ. ಹಲವು ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ನಡೆದ ಭೀಕರ ದಾಳಿ ಇದಾಗಿದ್ದು, ಸ್ಫೋಟದ ಬಗ್ಗೆ ಯಾವುದೇ ಸಂಸ್ಥೆ ಹೊಣೆ ಹೊತ್ತುಕೊಂಡಿಲ್ಲ.

ಇತ್ತ ದಾಳಿಯಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯರ ಸಹಾಯಕ್ಕಾಗಿ ಭಾರತ ರಾಯಭಾರ ಕಚೇರಿ ಸಹಾಯವಾಣಿಯನ್ನು ಆರಂಭಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಸಹಾಯವಾಣಿ ಸಂಖ್ಯೆ: +94777 903082, +94112 422789

Comments

Leave a Reply

Your email address will not be published. Required fields are marked *