ಲಂಕಾದಲ್ಲಿ ಸರಣಿ ಸ್ಫೋಟ ಪ್ರಕರಣ- ಬೆಂಗ್ಳೂರಿಗೆ ನಾಗರಾಜ ರೆಡ್ಡಿ ಮೃತದೇಹ

– ಮುಗಿಲುಮುಟ್ಟಿದ ಬಂಧುಬಾಂಧವರ ಆಕ್ರಂದನ

ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಸಾವನ್ನಪ್ಪಿದ್ದ ನಗರದ ಬಿಟಿಎಂ ಲೇಔಟ್‍ನ ನಾಗರಾಜರೆಡ್ಡಿ ಮೃತದೇಹ ಬೆಂಗಳೂರಿಗೆ ತರಲಾಗಿದೆ.

ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಶಾಸಕ ಎಸ್‍ಆರ್ ವಿಶ್ವನಾಥ್ ನೇತೃತ್ವದಲ್ಲಿ ಮೃತದೇಹ ತರಲಾಯಿತು. ವಿಮಾನ ನಿಲ್ದಾಣದಿಂದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ತರಲಾಗುತ್ತಿದ್ದು, ಕೆಲ ಪ್ರಕ್ರಿಯೆ ಬಳಿಕ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಬಿಟಿಎಂ ಲೇಔಟ್ ನಿವಾಸಕ್ಕೆ ರವಾನಿಸಲಾಗುತ್ತದೆ. ನಾಳೆ ಬೆಳಗ್ಗೆ 11 ಗಂಟೆ ಬಳಿಕ ನಾಗರಾಜರೆಡ್ಡಿ ಅಂತ್ಯಕ್ರಿಯೆ ನಡೆಯುವ ನಿರೀಕ್ಷೆ ಇದ್ದು,  ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಕೊಲಂಬೋದಲ್ಲಿ ಒಟ್ಟಾರೆ ಸಾವನ್ನಪ್ಪಿದ ಕನ್ನಡಿಗರ ಸಂಖ್ಯೆ 8ಕ್ಕೆ ಏರಿಕೆ ಆಗಿದ್ದು, ಮಾರೇಗೌಡ, ಪುಟ್ಟರಾಜು ಅವರ ಮೃತದೇಹ ಪತ್ತೆಯಾಗಿದೆ. ಸದ್ಯ ನಾಗರಾಜರೆಡ್ಡಿ ಅವರ ಮೃತ ದೇಹ ಬೆಂಗಳೂರಿಗೆ ತಲುಪಿದ್ದು, ಇಂದು ಮಧ್ಯರಾತ್ರಿ 4 ಮೃತದೇಹಗಳು ಹಾಗೂ ಉಳಿದ ಮೃತದೇಹಗಳು ಬುಧವಾರ ಬೆಳಗ್ಗೆ ತರಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.

ಸ್ಫೋಟ ಪ್ರಕರಣದಲ್ಲಿ ಕೋರಮಂಗಲದ ಪುರುಷೋತ್ತಮ ರೆಡ್ಡಿ ಅವರಿಗೆ ತೀವ್ರವಾಗಿ ಗಾಯವಾಗಿದ್ದು, ಕೊಲಂಬೋದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಾಳೆ ಕೊಲಂಬೋದಿಂದ ಏರ್ ಲಿಫ್ಟ್ ಮಾಡಿ ಕರೆತರಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಪುರುಷೋತ್ತಮ ರೆಡ್ಡಿ ಅವರು ಯಲಹಂಕ ಶಾಸಕ ಎಸ್ ವಿಶ್ವನಾಥ್ ಸಂಬಂಧಿಯಾಗಿದ್ದು, ಪ್ರವಾಸಕ್ಕೆ ತೆರಳಿ ಶಾಂಗ್ರಿಲಾ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು.

Comments

Leave a Reply

Your email address will not be published. Required fields are marked *