ಶ್ರೀಲಂಕಾ ಬಾಂಬ್ ಸ್ಫೋಟ – ಓರ್ವ ಮಹಿಳೆ ಭಾಗಿ, ಸುಶಿಕ್ಷಿತರೇ ಬಾಂಬರ್‌ಗಳು!

ಕೊಲಂಬೋ: ಸರಣಿ ಬಾಂಬ್ ಸ್ಫೋಟ ಕೃತ್ಯದಲ್ಲಿ ಓರ್ವ ಮಹಿಳೆಯೂ ಭಾಗಿಯಾಗಿದ್ದಳು ಎನ್ನುವ ಸ್ಫೋಟಕ ವಿಚಾರ ಶ್ರೀಲಂಕಾ ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಬುಧವಾರ ಶ್ರೀಲಂಕಾದ ಪೊಲೀಸ್ ವಕ್ತಾರ ರುವಾನ್ ಗುನಶೇಖರ ಮಾತನಾಡಿ, ಒಟ್ಟು 9 ಮಂದಿ ಕೃತ್ಯ ಎಸಗಿದ್ದು, ಈ ತಂಡದಲ್ಲಿ ಓರ್ವ ಮಹಿಳೆ ಭಾಗಿಯಾಗಿದ್ದಾಳೆ. ಈ ದಾಳಿ ಸಂಬಂಧ ಇಲ್ಲಿಯವರೆಗೆ 60 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಓರ್ವ ಮಹಿಳೆ ಭಾಗಿಯಾಗಿರುವುದನ್ನು ಅಪರಾಧ ತನಿಖಾ ತಂಡ(ಸಿಐಡಿ) ಅಧಿಕೃತವಾಗಿ ತಿಳಿಸಿದೆ. ಬಂಧನಕ್ಕೆ ಒಳಗಾಗಿರುವ 60 ಮಂದಿಯಲ್ಲಿ 32 ಮಂದಿ ಸಿಐಡಿ ಕಸ್ಟಡಿಯಲ್ಲಿದ್ದಾರೆ. ಬಂಧನಕ್ಕೆ ಒಳಗಾದ ಎಲ್ಲರೂ ಶ್ರೀಲಂಕಾದ ಪ್ರಜೆಗಳು ಎಂದು ಮಾಹಿತಿ ನೀಡಿದ್ದಾರೆ.

ಶ್ರೀಲಂಕಾದ ಉಪ ರಕ್ಷಣಾ ಸಚಿವ ರುವಾನ ವಿಜೆಯವರ್ಧನೆ ಮಾತನಾಡಿ, ಎಲ್ಲ ಆತ್ಮಹತ್ಯಾ ಬಾಂಬರ್‍ಗಳು ಸುಶಿಕ್ಷಿತರಾಗಿದ್ದು ಶ್ರೀಮಂತರಾಗಿದ್ದಾರೆ. ಓರ್ವ ಇಂಗ್ಲೆಂಡಿನಲ್ಲಿ ಪದವಿ ಪಡೆದಿದ್ದರೆ ಇನ್ನೊಬ್ಬ ಆಸ್ಟ್ರೇಲಿಯಾದಲ್ಲಿ ಸ್ನಾತಕೋತ್ತರ ಪದವಿ ಓದಿದ್ದ ಎಂಬುದನ್ನು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ವೇಳೆ ನ್ಯೂಜಿಲೆಂಡಿನ ಕ್ರೈಸ್ಟ್‍ಚರ್ಚ್ ಮಸೀದಿ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎನ್ನುವುದು ತಿಳಿದು ಬಂದಿದೆ. ಒಟ್ಟು ಈ ದಾಳಿಯಲ್ಲಿ 359 ಮಂದಿ ಮೃತಪಟ್ಟಿದ್ದು ಇದರಲ್ಲಿ 39 ಮಂದಿ ವಿದೇಶಿಯರು ಸೇರಿದ್ದಾರೆ. 17 ಮೃತ ದೇಹಗಳನ್ನು ಗುರುತಿಸಲಾಗಿದ್ದು ಆ ದೇಹಗಳನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೆಲವು ಅಧಿಕಾರಿಗಳಿಗೆ ಉಗ್ರರಿಂದ ದಾಳಿ ನಡೆಯಲಿದೆ ಎನ್ನುವ ಮಾಹಿತಿ ಸಿಕ್ಕಿತ್ತು ಎನ್ನುವ ವಿಚಾರವನ್ನು ಒಪ್ಪಿಕೊಂಡ ಉಪ ರಕ್ಷಣಾ ಸಚಿವರು ಈ ವಿಚಾರವನ್ನು ಪ್ರಧಾನ ಮಂತ್ರಿಯವರಿಗೆ ತಿಳಿಸಿರಲಿಲ್ಲ ಎಂದು ಹೇಳಿದರು.

ಈ ದಾಳಿಯ ಹಿಂದೆ ಐಸಿಸ್ ಪಾತ್ರ ಇದ್ಯಾ ಎನ್ನುವ ಪ್ರಶ್ನೆಗೆ, ಈ ದಾಳಿಗೆ ಐಸಿಸ್ ಅಥವಾ ಬೇರೆ ಅಂತರಾಷ್ಟ್ರೀಯ ಸಂಘಟನೆಯ ಸಂಬಂಧದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಉತ್ತರಿಸಿದರು.

ಐಸಿಸ್ ಸಂಘಟನೆ ಮಂಗಳವಾರ ಶ್ರೀಲಂಕಾದಲ್ಲಿ ಕೃತ್ಯ ಎಸಗಿದ್ದು ನಾವೇ ಎಂದು ಹೇಳಿತ್ತು.

Comments

Leave a Reply

Your email address will not be published. Required fields are marked *