ಭಾರತೀಯ ಕುಸ್ತಿ ಒಕ್ಕೂಟದ ಮೇಲಿನ ಅಮಾನತು ವಾಪಸ್

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ (WFI)ದ ಮೇಲೆ ವಿಧಿಸಲಾಗಿದ್ದ ಅಮಾನತು ಆದೇಶವನ್ನು ಕ್ರೀಡಾ ಸಚಿವಾಲಯ ರದ್ದುಗೊಳಿಸಿದೆ.

ಮುಂದಿನ ಸೂಚನೆ ಬರುವವರೆಗೆ ಒಕ್ಕೂಟದ ದೈನಂದಿನ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಯಿಂದ ದೂರವಿರಲು ಹೊಸದಾಗಿ ಆಯ್ಕೆಯಾದ ಕಾರ್ಯಕಾರಿ ಸಮಿತಿಗೆ ಸೂಚನೆ ನೀಡಿದೆ.

WFI ಸೂಕ್ತ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಕ್ರೀಡೆ ಮತ್ತು ಕ್ರೀಡಾಪಟುಗಳ ಹಿತದೃಷ್ಟಿಯಿಂದ ಸಚಿವಾಲಯವು ಅಮಾನತು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಕ್ರಮ ಕೈಗೊಂಡಿದ್ದಕ್ಕಾಗಿ ನಾನು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಇದು ನಮಗೆ ಸುಗಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಕ್ರೀಡೆಯ ಹಿತದೃಷ್ಟಿಯಿಂದ ಇದು ಅಗತ್ಯವಾಗಿತ್ತು. ಸ್ಪರ್ಧೆಗಳ ಕೊರತೆಯಿಂದ ಕ್ರೀಡಾಪಟುಗಳು ಬಳಲುತ್ತಿದ್ದರು ಎಂದು ಸಂಜಯ್ ಸಿಂಗ್ ತಿಳಿಸಿದ್ದಾರೆ.

ಅಮ್ಮನ್‌ನಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್‌ಗೆ ಆಯ್ಕೆ ಟ್ರಯಲ್ಸ್ ಸೇರಿದಂತೆ ಚಟುವಟಿಕೆಗಳನ್ನು ಪುನರಾರಂಭಿಸಲು ಈ ಆದೇಶ ದಾರಿ ಮಾಡಿಕೊಟ್ಟಿದೆ. ಡಿಸೆಂಬರ್ 21 ರಂದು ಆಯ್ಕೆಯಾದ ಹೊಸ ಸಂಸ್ಥೆಯ ಆಡಳಿತ ಮತ್ತು ಕಾರ್ಯವಿಧಾನದ ಸಮಗ್ರತೆಯಲ್ಲಿನ ಲೋಪಗಳಿಗಾಗಿ ಸಚಿವಾಲಯವು 2023 ರ ಡಿ.24 ರಂದು WFI ಅನ್ನು ಅಮಾನತುಗೊಳಿಸಿತ್ತು.

ಸಂಜಯ್ ಸಿಂಗ್ ನೇತೃತ್ವದ ಒಕ್ಕೂಟವು ಮಾಜಿ WFI ಮುಖ್ಯಸ್ಥ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಭದ್ರಕೋಟೆಯಾದ ಗೊಂಡಾದ ನಂದಿನಿ ನಗರದಲ್ಲಿ 15 ವರ್ಷದೊಳಗಿನವರ ಮತ್ತು 20 ವರ್ಷದೊಳಗಿನವರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ನಡೆಸುವುದಾಗಿ ಘೋಷಿಸಿತ್ತು. ಮಾಜಿ ಬಿಜೆಪಿ ಸಂಸದ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕಾರಣ ಈ ಸ್ಥಳದ ಆಯ್ಕೆಯು ಸರ್ಕಾರವನ್ನು ಕೆರಳಿಸಿತ್ತು.