ಹಾವೇರಿಯಲ್ಲೊಂದು ವಿಶೇಷ ಮದುವೆ

ಹಾವೇರಿ: ಮದುವೆ ಅಂದರೆ ಅಲ್ಲಿ ಅದ್ಧೂರಿ ಸಂಭ್ರಮ ಸಾಮಾನ್ಯ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅಂಗವಿಕಲ, ಕಣ್ಣುಗಳಿಲ್ಲದ ಯುವತಿಗೆ ಬಾಳು ನೀಡಿದ ಯುವಕ, ಇಂತಹ ಅಪರೂಪದ ಮದುವೆಗಳನ್ನ ನೋಡಿದ್ದೇವೆ. ಅಂತಹದ್ದೇ ವಿವಾಹವೊಂದು ಹಾವೇರಿ ನಗರದಲ್ಲಿ ನಡೆದಿದೆ.

ಹೌದು, ಹಾವೇರಿ ನಗರದ ರೇಣುಕಾ ಮಂದಿರ ಇಂದು ಈ ಅಪರೂಪದ ಮದುವೆಗೆ ಸಾಕ್ಷಿಯಾಗಿದೆ. ಯುವಕ ಮತ್ತು ಯುವತಿಗೆ ಇಬ್ಬರಿಗೂ ಮಾತು (ಮೂಗರು) ಬರುವುದಿಲ್ಲ. ಈ ಇಬ್ಬರು ಇಂದು ಅಗ್ನಿ ಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದಾರೆ.

ಮೂಲತಃ ಹಾವೇರಿ ನಗರದ ನಿವಾಸಿ ಶಿವಪುತ್ರಪ್ಪ ನಾರಪ್ಪನವರ್ ಮಗ ಗಂಗಾಧರರಿಗೆ ಹುಟ್ಟಿನಿಂದಲೇ ಮಾತು ಬರುತ್ತಿರಲಿಲ್ಲ. ಅದರೂ ಪಿಯುಸಿವರಗೇ ಶಿಕ್ಷಣವನ್ನು ಮುಗಿಸಿದ್ದಾರೆ. ಪ್ರಸ್ತುತ ಸೋದರ ಮಾವನ ಪ್ರಿಂಟಿಂಗ್ ಪ್ರೆಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವತಿ ಶಿಗ್ಗಾಂವಿ ತಾಲೂಕಿನ ಬಂಕಾಪುರದ ನಿವಾಸಿ, ಗುರುಸಿದ್ದಪ್ಪ ನಾರಾಯಣಪುರ ಪುತ್ರಿ ಪವಿತ್ರ. ಇಬ್ಬರ ವಿವಾಹ ಗುರುಹಿರಿಯರ ನಿಶ್ಚಯದಂತೆ ನಡೆದಿದೆ.

ಮಂತ್ರಘೋಷ, ಗಟ್ಟಿಮೇಳದೊಂದಿಗೆ ಮಾತು ಬಾರದ ಗಂಗಾಧರ ಮತ್ತು ಪವಿತ್ರರ ಮದುವೆ ಅದ್ಧೂರಿಯಾಗಿ ಜರುಗಿತು. ನವದಂಪತಿಗಳಿಗೆ ಸಂಬಂಧಿಕರು ಹಾಗೂ ಸ್ನೇಹಿತರು ನೂರುಕಾಲ ಚೆನ್ನಾಗಿ ಬಾಳಿಬದುಕಿ ಎಂದು ಆರ್ಶೀವಾದ ಮಾಡಿದ್ದಾರೆ. ಪರಸ್ಪರ ಇಬ್ಬರಿಗೂ ಮಾತು ಬಾರದೇ ಇರುವುದು ಅವರಿಬ್ಬರು ಹೊಂದಾಣಿಕೆ ಮಾಡಿಕೊಂಡು ಜೀವನ ಮಾಡುತ್ತಾರೆ ಎನ್ನುವುದು ಹಿರಿಯರ ನಂಬಿಕೆ.

Comments

Leave a Reply

Your email address will not be published. Required fields are marked *