ಅಂಚೆ ಚೀಟಿಯಲ್ಲಿ ಸಂತ ಲಾರೆನ್ಸರು- ಅತ್ತೂರು ಚರ್ಚ್ ಗೆ ಕೇಂದ್ರ ಸರ್ಕಾರದ ಗೌರವ

ಉಡುಪಿ: ಜಿಲ್ಲೆಯ ಕಾರ್ಕಳದ ವಿಶ್ವ ಪ್ರಸಿದ್ಧ ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರವನ್ನು ಮೈನರ್ ಬಾಸಿಲಿಕಾ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಇದೀಗ ಅತ್ತೂರು ಚರ್ಚ್ ಗೆ ಮತ್ತೊಂದು ಗರಿಮೆ ಒಲಿದಿದೆ.

ಭಾರತೀಯ ಅಂಚೆ ಇಲಾಖೆ ಸಂತ ಲಾರೆನ್ಸರ ಭಾವಚಿತ್ರವಿರುವ ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಜನವರಿ 18ರಂದು ಮಧ್ಯಾಹ್ನ 12 ಗಂಟೆಗೆ ಕಾರ್ಕಳದಲ್ಲಿ ಅಂಚೆ ಚೀಟಿ ಬಿಡುಗಡೆ ಆಗಲಿದೆ. ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾ, ಪವಾಡ ಮೂರ್ತಿಯ ಭಾವಚಿತ್ರವಿರುವ ವಿಶೇಷ ಕವರ್, ಹಾಗೂ ಬಾಸಿಲಿಕಾ ಲಾಂಛನದ ಕ್ಯಾನ್ಸಲೇಶನ್ (ಮೊಹರು) ಬಿಡುಗಡೆಯಾಗಲಿದ್ದು, ಅಂಚೆ ಕಚೇರಿಗಳಲ್ಲಿ ಲಭ್ಯವಾಗಲಿದೆ. ಅಂಚೆ ಲಕೋಟೆಗೆ ಬಳಸಬಹುದಾದ ಸಂತ ಲಾರೆನ್ಸ್ ಬಾಸಿಲಿಕಾ ಮತ್ತು ಪವಾಡ ಮೂರ್ತಿಯ ಭಾವಚಿತ್ರವುಳ್ಳ ಮೈ ಸ್ಟ್ಯಾಂಪ್ 5 ರೂಪಾಯಿ ಮುಖಬೆಲೆಯನ್ನು ಹೊಂದಿದೆ.

ಕ್ರೈಸ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಅತ್ತೂರು ಸಂತ ಲಾರೆನ್ಸ್ ದೇವಾಲಯವನ್ನು 2016 ಎಪ್ರಿಲ್ 26ರಂದು ಮಹಾದೇವಾಲಯವಾಗಿ ಉನ್ನತಿಗೆ ಏರಿಸಿದ್ದರು. 2019, ಅಗಸ್ಟ್ 1 ರಂದು ಇದರ ಅಧಿಕೃತ ಘೋಷಣೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆದಿತ್ತು. ಬಾಸಿಲಿಕಾ ಎಂದು ಘೋಷಣೆಯಾದ ಸವಿನೆನಪಿಗಾಗಿ ಭಾರತೀಯ ಅಂಚೆ ಇಲಾಖೆ ಇಂತದ್ದೊಂದು ಗೌರವವನ್ನು ಸಲ್ಲಿಸಿದೆ. ಮುಂದಿನ ಜನಾಂಗಕ್ಕೆ ಈ ಚರ್ಚಿನ ಇತಿಹಾಸ ತಿಳಿಯಲು, ಅಧ್ಯಯನ ನಡೆಸಲು ಪೂರಕವಾಗಲಿದೆ ಎಂದು ಉಡುಪಿ ಕಾರ್ಪೊರೇಷನ್ ಬ್ಯಾಂಕ್ ಪ್ರಾಚೀನ ವಸ್ತು ಸಂಗ್ರಹಾಲಯದ ಎಂ.ಕೆ. ಕೃಷ್ಣಯ್ಯ ಹೇಳುತ್ತಾರೆ.

ಜನವರಿ 18ರಂದು ಮಧ್ಯಾಹ್ನ 12 ಗಂಟೆಗೆ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ಸಮಾರಂಭ ನಡೆಯಲಿದೆ. ಈ ವೇಳೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರ ಉಪಸ್ಥಿತಿಯಲ್ಲಿ ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಚೀಟಿಯನ್ನು ಅಂಚೆ ಇಲಾಖೆ ಬಿಡುಗಡೆ ಮಾಡಲಿದೆ.

Comments

Leave a Reply

Your email address will not be published. Required fields are marked *