ಕೊನೆಯ ಆಷಾಢ ಮಾಸ – ಚಾಮುಂಡಿಗೆ ವಿಶೇಷ ಪೂಜೆ

ಮೈಸೂರು: ಇಂದು ಕೊನೆಯ ಆಷಾಢ ಮಾಸದ ನಾಲ್ಕನೇ ಶುಕ್ರವಾರವಾಗಿದ್ದು, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜಾ ಪುನಸ್ಕಾರಗಳು ನಡೆಯುತ್ತಿವೆ.

ಮುಂಜಾನೆಯಿಂದಲೇ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ದೇವಿ ದರ್ಶನಕ್ಕಾಗಿ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ಭಕ್ತರು ನಿಂತಿದ್ದಾರೆ. ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಚಾಮುಂಡಿ ಬೆಟ್ಟದಲ್ಲಿ ಸಡಗರ ಮನೆ ಮಾಡಿದೆ.

ಭಕ್ತರು ದೇವಿ ದರ್ಶನಕ್ಕಾಗಿ 300 ರೂ., ಮತ್ತು 50 ರೂ., ಧರ್ಮ ದರ್ಶನದ ಕ್ಯೂಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ದೇವಾಲಯ ಒಳ ಮತ್ತು ಹೊರಾವರಣ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಭಕ್ತರು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಪ್ರತಿವಾರದಂತೆ ಕಡೆಯ ಶುಕ್ರವಾರಕ್ಕೂ ಕೆಎಸ್‍ಆರ್  ಟಿಸಿ ಉಚಿತ ಸೇವೆ ಮಾಡಲಾಗಿದ್ದು, ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಚಾಮುಂಡಿ ಬೆಟ್ಟ-ಚಾಮುಂಡಿ ಬೆಟ್ಟದಿಂದ ಹೆಲಿಪ್ಯಾಡ್ ವರೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ವಾಹನಗಳು ಕೂಡ ಹ್ಯಾಲಿಪ್ಯಾಡ್ ನಲ್ಲೇ ನಿಲುಗಡೆ ಮಾಡಬೇಕಾಗಿದೆ.

ಆಷಾಢ ಮಾಸದ ಕೊನೆಯ ಶುಕ್ರವಾರ ಹಿನ್ನೆಲೆಯಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಇಂದು ಬೆಟ್ಟ ಹತ್ತಿ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. ಬೆಟ್ಟದಲ್ಲಿ ವಾಹನ ದಟ್ಟಣೆ ತಪ್ಪಿಸಲು ಸಂಚಾರ ಮಾರ್ಗದಲ್ಲಿ ಬದಲಾವಣೆಯಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *