ಕರು ಹಾಕದೆಯೇ ಕೊಡ್ತಿದೆ ಹಾಲು – ಹಾವೇರಿಯಲ್ಲೊಂದು ವಿಚಿತ್ರ ಕಾಮಧೇನು

ಹಾವೇರಿ: ಕರು ಹಾಕಿದ ಬಳಿಕ ಹಸು ಹಾಲು ಕೊಡೋದು ಸಾಮಾನ್ಯ. ಆದರೆ ಇಲ್ಲೊಂದು ಆಕಳು ಗರ್ಭವನ್ನ ಧರಿಸದೆ, ಕರುವನ್ನೂ ಹಾಕದೆ ಹಾಲು ಕೊಡುತ್ತಿದೆ. ಹದಿನಾರು ತಿಂಗಳು ಇದ್ದಾಗಿಂದ ಈ ಆಕಳು ಪ್ರತಿದಿನ ಐದು ಲೀಟರ್ ಹಾಲು ಕೊಡುತ್ತಿದೆ. ಮುಸ್ಲಿಮರೊಬ್ಬರ ಮನೆಯಲ್ಲಿರೋ ಈ ಆಕಳಿನ ಹಾಲು ಅವರ ಕುಟುಂಬಕ್ಕೆ ಆಸರೆ ಆಗಿದೆ. ಗರ್ಭ ಧರಿಸದೆ, ಕರು ಹಾಕದೆ ಹಾಲು ಕೊಡ್ತಿರೋದು ಗ್ರಾಮಸ್ಥರನ್ನ ಆಶ್ಚರ್ಯ ಚಕಿತರನ್ನಾಗಿ ಮಾಡಿದೆ.

ಹಾವೇರಿ ತಾಲೂಕಿನ ದಿಡಗೂರು ಗ್ರಾಮದಲ್ಲೊಂದು ಹಸು ಪ್ರಾಕೃತಿಕ ವೈಚಿತ್ರ್ಯಕ್ಕೆ ಸಾಕ್ಷಿ ಆಗಿ, ವೈದ್ಯಲೋಕಕ್ಕೆ ಸವಾಲೊಡ್ಡಿದೆ. ಸಾಮಾನ್ಯವಾಗಿ ಹಸುಗಳು ಕರು ಹಾಕಿದ ಬಳಿಕ ಹಾಲು ಕೊಡುತ್ತವೆ. ಆದರೆ ಗ್ರಾಮದ ಅಲ್ತಾಫ ಕುಬಟೂರ ಎಂಬವರ ಮನೆಯಲ್ಲಿರುವ 19 ತಿಂಗಳಿನ ಈ ಹಸು ಗರ್ಭ ಧರಿಸದೇ, ಕರು ಹಾಕದೇ ದಿನಕ್ಕೆ 5 ಲೀಟರ್ ಹಾಲು ಕೊಡ್ತಿದೆ.

ಮೊದಮೊದಲಿಗೆ ಈ ಹಸುವಿನ ಹಾಲನ್ನು ಅಲ್ತಾಫ ತಿಪ್ಪೆಗೆ ಚೆಲ್ಲುತ್ತಿದ್ದರಂತೆ. ಆದರೆ ಹಾಲನ್ನು ಪರೀಕ್ಷೆಗೆ ಕಳಿಸಿದ ಮೇಲೆ ಉಪಯೋಗಕ್ಕೆ ಯೋಗ್ಯವಿದೆ ಎಂದು ತಿಳಿದು, ಈಗ ಮನೆ ಬಳಕೆ ಮತ್ತು ಡೈರಿಗೂ ಹಾಲನ್ನು ಹಾಕುತ್ತಿದ್ದಾರೆ. 5 ಮಕ್ಕಳ ತಂದೆಯಾಗಿರುವ ಅಲ್ತಾಫರ ಜೀವನ ನಿರ್ವಹಣೆಗೆ ತಿಂಗಳಿಗೆ ಆರೂವರೆ ಸಾವಿರ ಸಂಪಾದನೆಯೂ ಆಗುತ್ತಿದೆ. ಕಷ್ಟದಲ್ಲಿ ಕಾಮಧೇನುವಾಗಿದೆ ಎಂದು ಅಲ್ತಾಫ ಹೇಳುತ್ತಾರೆ.

ಈ ಹಸು ಎಲ್ಲಾ ಹಸುಗಳಂತೆ ಫುಲ್ ಆ್ಯಕ್ಟೀವ್ ಆಗಿದೆ. ಕಳೆದ ಮೂರು ತಿಂಗಳಿನಿಂದ ಹಾಲು ಕೊಡುತ್ತಿದ್ದರೂ ಆರೋಗ್ಯಕ್ಕೆ ತೊಂದರೆ ಅಗಿಲ್ಲ. ಪ್ರತಿದಿನ ಅಲ್ತಾಫ್ ಮೊದಲು ಪೂಜಿಸಿ ಧೂಪ ಹಚ್ಚಿ ನಂತರ ಹಾಲು ಕರೆಯುತ್ತಾರೆ. ಗ್ರಾಮಸ್ಥರಿಗೆ ಈ ಹಸುವಿನ ಕುತೂಹಲದ ಕೇಂದ್ರಬಿಂದುವಾಗಿ ಅಚ್ಚರಿ ಮೂಡಿಸಿದೆ.

ಒಟ್ಟಿನಲ್ಲಿ ನಿಸರ್ಗದ ಪದ್ಧತಿಗೆ ವಿರುದ್ಧವಾಗಿ, ವೈದ್ಯಲೋಕಕ್ಕೆ ಅಚ್ಚರಿ ಆಗಿರೋ ಹಸು ಬಡಮುಸ್ಲಿಮನ ಕುಟುಂಬಕ್ಕೆ ಕಾಮಧೇನುವಾಗಿದೆ.

Comments

Leave a Reply

Your email address will not be published. Required fields are marked *