ದೀಪಾವಳಿಯಂದು ನಡೆಯುತ್ತೆ ಮೈ ಜುಮ್ಮೆನಿಸೋ ಹೋರಿ ಬೆದರಿಸುವ ಸ್ಪರ್ಧೆ

ಹಾವೇರಿ: ಉತ್ತರ ಕರ್ನಾಟಕದಲ್ಲಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಅದರಲ್ಲೂ ದೀಪಾವಳಿ ದಿನ ಹೋರಿ ಬೆದರಿಸುವ ಸ್ಪರ್ಧೆ ಅಂತೂ ಎಲ್ಲರನ್ನೂ ಮೈ ಜುಮ್ಮೆನ್ನುವಂತೆ ಮಾಡುತ್ತೆ.

ನಗರದ ಶ್ರೀ ವೀರಭದ್ರಶ್ವರ ದೇವಸ್ಥಾನ ಬಳಿ ರೈತರು ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯನ್ನ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಹೋರಿಗಳಿಗೆ ಬಲೂನು, ರಿಬ್ಬನ್, ಕೊಬ್ಬರಿ, ಮಿಂಚುಬಟ್ಟೆ ಕಟ್ಟಿ ಶೃಂಗಾರಿಸಲಾಗಿರುತ್ತದೆ. ನೋಡುಗರ ಮನಸೂರೆಗೊಳ್ಳುವ ಹಾಗೆ ಶೃಂಗರಿಸಿ ಮೊದಲು ಪ್ರದರ್ಶನ ಮಾಡಲಾಗುತ್ತದೆ.

ಸ್ಪರ್ಧೆಯ ನಿಯಮ: ರಸ್ತೆಯ ಮಧ್ಯೆ ಶೃಂಗರಿಸಲಾದ ಹೋರಿಗಳನ್ನು ಒಂದೊಂದಾಗಿ ಬಿಡಲಾಗುತ್ತದೆ. ಆ ಹೋರಿಯು ತನ್ನ ಕೊರಳಿನಲ್ಲಿರುವ ಕೊಬ್ಬರಿಯ ಮಾಲೆಯನ್ನು ಕಳೆದುಕೊಳ್ಳಬಾರದು. ಕಳೆದುಕೊಂಡರೆ ಆ ಸ್ಪರ್ಧೆಯಲ್ಲಿ ಆ ಹೋರಿ ಸೋತಂತೆ. ಹೆಚ್ಚು ಬಾರಿ ಗೆದ್ದ ಹೋರಿಗೆ ಬಹುಮಾನ ನೀಡಲಾಗುತ್ತದೆ. ಈ ಹೋರಿಗಳನ್ನು ಹಿಡಿಯಲು ನೂರಾರು ಯುವಕರ ದಂಡೇ ಸೇರಿರುತ್ತದೆ. ಹೆಚ್ಚು ಕೊಬ್ಬರಿ ಮಾಲೆಯನ್ನು ಕಿತ್ತುಕೊಂಡವರಿಗೆ ಬಹುಮಾನ ಕೊಡಲಾಗುತ್ತದೆ.

ಸುತ್ತಮುತ್ತಲಿನ ಗ್ರಾಮದ ನೂರಾರು ಹೋರಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ರೈತರು ಎತ್ತುಗಳಿಗೆ ರಿಬ್ಬನ್, ಬಲೂನ್ ಹಾಗೂ ಕೊಬ್ಬರಿ ಕಟ್ಟಿ ಹೋರಿಯನ್ನ ಓಡಲು ಬಿಡುತ್ತಾರೆ. ನೂರಾರು ಯುವಕರ ದಂಡು ಜಿಂಕೆಯಂತೆ ಓಡುವ ಹೋರಿಗಳನ್ನ ಹಿಡಿಯಲು ಮುಂದಾಗುತ್ತಾರೆ. ಹೋರಿಯ ಬಾಲವನ್ನ ಹಿಡಿದು ಓಡುವ ದೃಶ್ಯ ನೋಡಿಗರನ್ನ ಅಯೋ ಪಾಪಾ ಎನ್ನಿವಂತೆ ಮಾಡುತ್ತದೆ. ಮೈ ಮೇಲೆ ಒಮ್ಮೆಲೆ ಜಿಗಿದು ಬರುವ ಹೋರಿಗಳಿಗೆ ಹೆದರಿ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ನಿಂತಿರುವ ಪ್ರೇಕ್ಷಕರು, ಹೋರಿಗಳನ್ನ ಹಿಡಿದುಕೊಂಡು ಓಡುವ ದೃಶ್ಯಗಳು, ಹೋರಿಯ ಕಾಲಿನ ಕೆಳಗೆ ಸಿಕ್ಕಿಹಾಕಿಕೊಳ್ಳವ ಯುವಕರು, ಹೋರಿಗಳನ್ನ ಹಿಡಿದು ಕೊಬ್ಬರಿ ಮಾಲೆಯನ್ನು ಕಿತ್ತುಕೊಳ್ಳುವ ಯುವಕರು ಹೀಗೆ ಎಲ್ಲಾ ದೃಶ್ಯಗಳು ನೋಡುಗರ ಮೈ ಜುಮ್ಮೆನ್ನುವಂತೆ ಮಾಡುತ್ತದೆ.

ಯಾರ ಕೈಗೂ ಸಿಗದೇ ಅಕಾಡದಿಂದ ಎಲ್ಲರನ್ನೂ ರಂಜಿಸಿ, ಹೆದರಿಸಿ ಮುನ್ನುಗ್ಗಿ ಬಹುಮಾನ ಪಡೆದುಕೊಳ್ಳವ ಹೋರಿಗಳು ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಹೋರಿ ಓಡಿಸುವ ಸ್ಪರ್ಧೆಗೆ ಆಗಮಿಸಿದ ಎಲ್ಲಾ ಪ್ರೇಕ್ಷಕರು ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸುತ್ತಾರೆ.

https://youtu.be/r6IqrSxtCwc

Comments

Leave a Reply

Your email address will not be published. Required fields are marked *