ಮಸ್ಕ್‌ ಆಫರ್‌ ತಿರಸ್ಕರಿಸಿದ್ದ ಬೈಡನ್‌ – ಬಾಹ್ಯಾಕಾಶದಲ್ಲೇ 9 ತಿಂಗಳು ಕಳೆದ ಸುನಿತಾ

– ರಾಜಕೀಯ ಕಾರಣಕ್ಕೆ ನನ್ನ ಆಫರ್‌ ರಿಜೆಕ್ಟ್‌
– ಅಮೆರಿಕ ಮಾಧ್ಯಮಕ್ಕೆ ಮಸ್ಕ್ ಹೇಳಿಕೆ

ವಾಷಿಂಗ್ಟನ್‌: ನಾನು ಗಗನಯಾತ್ರಿಗಳನ್ನು ಮರಳಿ ತರುವ ಆಫರ್‌ ನೀಡಿದ್ದೆ. ಆದರೆ ಜೋ ಬೈಡನ್‌ (Joe Biden) ಸರ್ಕಾರ ಈ ಆಫರ್‌ ಅನ್ನು ರಾಜಕೀಯ ಕಾರಣಕ್ಕೆ ತಿರಸ್ಕರಿಸಿತ್ತು ಎಂದು ಸ್ಪೇಸ್‌ ಎಕ್ಸ್‌ (SpaceX) ಸಂಸ್ಥಾಪಕ ಎಲೋನ್‌ ಮಸ್ಕ್‌ (Elon Musk) ಹೇಳಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು, ಗಗನಯಾತ್ರಿಗಳು ಕೇವಲ ಎಂಟು ದಿನಗಳವರೆಗೆ ಮಾತ್ರ ಇರಬೇಕಿತ್ತು. ಆದರೆ ಸುಮಾರು 10 ತಿಂಗಳಿನಿಂದ ಅಲ್ಲಿದ್ದರು. ಸ್ಪೇಸ್‌ಎಕ್ಸ್ ಗಗನಯಾನಿಗಳನ್ನು ಕರೆತರುವ ಬಗ್ಗೆ ಬೈಡನ್‌ ಆಡಳಿತಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಆದರೆ ರಾಜಕೀಯ ಕಾರಣಗಳಿಗಾಗಿ ಇದನ್ನು ತಿರಸ್ಕರಿಸಲಾಗಿತ್ತು ಎಂದು ತಿಳಿಸಿದರು.

 

ಇಂದು ಭೂಮಿಗೆ ಮರಳಿದ ಬುಚ್‌ ವಿಲ್ಮೋರ್‌ ಅವರು ಬಾಹ್ಯಾಕಾಶದಲ್ಲಿ ಇದ್ದಾಗ ಈ ಪ್ರಶ್ನೆಯನ್ನು ಕೇಳಲಾಗಿತ್ತು. ಎಲೋನ್ ಮಸ್ಕ್ ಅವರು ನಿಮ್ಮನ್ನು ಮೊದಲೇ ಮರಳಿ ಕರೆತರುವ ಪ್ರಸ್ತಾಪವನ್ನು ನೀಡಿದ್ದಾಗಿ ಹೇಳಿದ್ದಾರೆ ಮತ್ತು ಅದನ್ನು ನಿರಾಕರಿಸಲಾಗಿದೆ ಇದು ನಿಜವೇ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ವಿಲ್ಮೋರ್‌ ಅವರು, ಮಸ್ಕ್ ಹೇಳುವುದು ಸಂಪೂರ್ಣವಾಗಿ ವಾಸ್ತವ. ಇಷ್ಟು ಮಾತ್ರ ಈಗ ನಾನು ಹೇಳಬಲ್ಲೆ ಎಂದಿದ್ದರು. ಇದನ್ನೂ ಓದಿ: ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್- 286 ದಿನಗಳ ಅಂತರಿಕ್ಷ ವಾಸ ಅಂತ್ಯ. ಟಚ್‌ಡೌನ್‌ ಪ್ರಕ್ರಿಯೆ ಹೇಗಾಯ್ತು?

ಬೋಯಿಂಗ್‌ ಕಳುಹಿಸಿದ ನೌಕೆಯಲ್ಲಿ ಸಮಸ್ಯೆ ಎದುರಾದಾಗ ಮಸ್ಕ್‌ ಸ್ಪೇಸ್‌ ಎಕ್ಸ್‌ ಕ್ಯಾಪ್ಸುಲ್‌ ಮೂಲಕ ಮರಳಿ ಭೂಮಿಗೆ ತರುವ ಪ್ರಸ್ತಾಪ ಇಟ್ಟಿದ್ದರು.

ಜೋ ರೋಗನ್ ಅವರ ಜೊತೆ ಮಾತನಾಡಿದ್ದ ಮಸ್ಕ್‌, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಅವರ ಪ್ರಚಾರಕ್ಕೆ ಹಾನಿ ಮಾಡಲು ಬಯಸದ ಕಾರಣ ಬೈಡನ್‌ ಸರ್ಕಾರ ರಾಜಕೀಯ ಕಾರಣಗಳಿಗಾಗಿ ತನ್ನ ಮನವಿಯನ್ನು ನಿರಾಕರಿಸಿತ್ತು ಎಂದು ದೂರಿದ್ದರು.

ಮಸ್ಕ್‌ ಮೇಲೆ ಬೈಡನ್‌ಗೆ ಸಿಟ್ಟಾಕೆ?
ಮಸ್ಕ್‌ ಈ ಹಿಂದೆ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಿದ್ದರು. ಮಸ್ಕ್‌ಗೆ ಅಮೆರಿಕ ಪೌರತ್ವ ಸಿಕ್ಕಿದ್ದು 2002ರಲ್ಲಿ. ಈ ಹಿಂದೆ ಬರಾಕ್‌ ಒಬಾಮಾ (Barack Obama) ನಂತರ ಹಿಲರಿ ಕ್ಲಿಂಟನ್‌ (Hillary Clinton) ನಂತರ ಜೋ ಬೈಡನ್‌ (Joe Biden) ಅವರನ್ನು ಮಸ್ಕ್‌ ಬೆಂಬಲಿಸಿದ್ದರು. 2016ರಲ್ಲಿ ಟ್ರಂಪ್‌ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಗೆ ಆಗುವ ವ್ಯಕ್ತಿಯಲ್ಲ ಎಂದಿದ್ದರು. ರಿಪಬ್ಲಿಕನ್‌ ಪಕ್ಷದ ವಿರೋಧಿಯಾಗಿದ್ದ ಮಸ್ಕ್‌ ಈಗ ಆ ಪಕ್ಷದ ಪರ ಒಲವು ಹೊಂದಲು ಕಾರಣವಾದ ಮೊದಲ ಘಟನೆ ಯಾವುದು ಎಂದರೆ ಅದು ಕೋವಿಡ್.

ಕೊರೊನಾಗೆ ಲಸಿಕೆ ಕಂಡು ಹಿಡಿದ ನಂತರ ವಿಶ್ವಾದ್ಯಂತ ವಿತರಣೆ ಆರಂಭವಾಯಿತು. ಈ ವೇಳೆ ಮಸ್ಕ್‌ ಲಸಿಕೆಯನ್ನು ನಾನು ಲಸಿಕೆಯನ್ನು ತೆಗೆದುಕೊಳ್ಳಲ್ಲ ಎಂದಿದ್ದರು. ಇದು ಅಮೆರಿಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಯಿತು. ನಂತರ ಮಸ್ಕ್ ಲಸಿಕೆಯನ್ನು ತೆಗೆದುಕೊಂಡಿದ್ದರು. ತೆಗೆದುಕೊಂಡಿದ್ದರೂ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎನ್ನುವುದು ಸರಿಯಲ್ಲ ಎಂದು ಹೇಳಿದ್ದರು. ಬೈಡನ್‌ ಸರ್ಕಾರದ ವಿರುದ್ಧ ಅಸಮಾಧಾನವಿದ್ದರೂ ಮಸ್ಕ್‌ ಅದನ್ನು ಎಲ್ಲಿಯೂ ಬಹಿರಂಗವಾಗಿ ತೋರಿಸಿಕೊಂಡಿರಲಿಲ್ಲ.

 

2021 ರಲ್ಲಿ ಅಮೆರಿಕದ ಅಧ್ಯಕ್ಷರ ನಿವಾಸವಾದ ಶ್ವೇತ ಭವನದಲ್ಲಿ ಎಲೆಕ್ಟ್ರಿಕ್‌ ವಾಹನಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಅಮೆರಿಕದ ಅಟೋಮೊಬೈಲ್‌ ಕಂಪನಿಯ ಮಾಲೀಕರನ್ನು ಆಹ್ವಾನಿಸಲಾಗಿತ್ತು. ಆದರೆ ವಿಶ್ವದ ನಂಬರ್‌ ಒನ್‌ ಎಲೆಕ್ಟ್ರಿಕ್‌ ಕಾರು ಕಂಪನಿಯಾಗಿರುವ ಟೆಸ್ಲಾ ಮಾಲೀಕ ಮಸ್ಕ್‌ ಅವರನ್ನು ಆಹ್ವಾನಿಸಿರಲಿಲ್ಲ. ಉದ್ದೇಶಪೂರ್ವಕವಾಗಿ ಅಮೆರಿಕ ಸರ್ಕಾರ ನನ್ನನ್ನು ಕಡೆಗಣಿಸಿ ಅವಮಾನ ಮಾಡಿದ್ದರೆ ಎಂದು ತಿಳಿದ ಮಸ್ಕ್‌ 2022 ರಿಂದ ರಿಪಬ್ಲಿಕನ್‌ ಗುಂಪುಗಳಿಗೆ ಹಣಕಾಸಿನ ನೆರವು ನೀಡಲು ಆರಂಭಿಸಿದರು. ಇದನ್ನೂ ಓದಿ: ಭೂಮಿಗೆ ಸುನಿತಾ ವಿಲಿಯಮ್ಸ್ ಇಳಿದಾಯ್ತು ಮುಂದೇನು? 45 ದಿನಗಳ ರಿಹ್ಯಾಬಿಲಿಟೇಶನ್‌ನಲ್ಲಿ ಏನಿರುತ್ತೆ?

ನಂತರದ ದಿನದಲ್ಲಿ ಮಸ್ಕ್‌ ಕಂಪನಿಯ ವಿರುದ್ಧ ಬೈಡನ್‌ ಸರ್ಕಾರ ಹಲವಾರು ತನಿಖೆ ಆರಂಭಿಸಿತು. ಉದ್ಯೋಗಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ಬಂದಾಗಲೂ ತನಿಖೆ ನಡೆಯಿತು. ಟ್ವಿಟ್ಟರ್‌ ಕಂಪನಿಯ ಸ್ವಾಧೀನ ಪ್ರಕ್ರಿಯೆ, ಟೆಸ್ಲಾ ಅಟೋಪೈಲಟ್‌ ವಿಶೇಷತೆ ಮೇಲೆ ತನಿಖೆಯನ್ನು ಎದುರಿಸಬೇಕಾಯಿತು. 2023ರಲ್ಲಿ ನೇರವಾಗಿಯೇ ನಾನು ಜೋ ಬೈಡನ್‌ ಅವರನ್ನು ಬೆಂಬಲಿಸುವುದಿಲ್ಲ ಎಂದು ಸಂದರ್ಶನದಲ್ಲಿ ಮಸ್ಕ್‌ ಹೇಳಿದರು.

ಟ್ಟಿಟ್ಟರ್‌ ಒಡೆತನ ಸಂಪೂರ್ಣ ಸಿಕ್ಕಿದ ಬೆನ್ನಲ್ಲೇ 2022 ರ ನವೆಂಬರ್‌ನಲ್ಲಿ ನಿಷೇಧಗೊಂಡಿದ್ದ ಟ್ರಂಪ್‌ ಖಾತೆಗೆ ಮಸ್ಕ್‌ ಮತ್ತೆ ಜೀವ ನೀಡುತ್ತಾರೆ. ಟ್ರಂಪ್‌ ಖಾತೆ ಮತ್ತೆ ಚಾಲನೆ ಸಿಕ್ಕಿದ್ದು ಬೈಡೆನ್‌ ಸರ್ಕಾರಕ್ಕೆ ಇಷ್ಟವಾಗಿರಲಿಲ್ಲ. ಇದರ ಬೆನ್ನಲ್ಲೇ ಟ್ರಂಪ್‌ ಕಂಪನಿಯ ವಿರುದ್ಧ ತನಿಖೆಗಳು ಮತ್ತಷ್ಟು ತೀವ್ರಗೊಳ್ಳುತ್ತದೆ.

ತನಿಖೆ ತೀವ್ರಗೊಳ್ಳೊತ್ತಿದ್ದಂತೆ ಚುನಾವಣೆಯಲ್ಲಿ ಟ್ರಂಪ್‌ ಪರ ಪ್ರಚಾರಕ್ಕೆ ಧುಮುಕಿದ್ದರು. ಟ್ರಂಪ್‌ಗೆ ಅತಿ ಹೆಚ್ಚು ದೇಣಿಗೆ ನೀಡಿದ ವ್ಯಕ್ತಿಗಳ ಪೈಕಿ ಮಸ್ಕ್‌ ಮೊದಲ ಸ್ಥಾನದಲ್ಲಿದ್ದಾರೆ. ಚುನಾವಣೆಯಲ್ಲಿ ಮಸ್ಕ್‌ ಅಮೆರಿಕ ಮಾಧ್ಯಮಗಳನ್ನು ಬಹಿರಂಗವಾಗಿಯೇ ದೂರಿದ್ದರು. ಟ್ರಂಪ್‌ ವಿರುದ್ಧ ಉದ್ದೇಶಪೂರ್ವವಾಗಿಯೇ ಅಪಪ್ರಚಾರ ಮಾಡಲಾಗುತ್ತದೆ. ಇವುಗಳಲ್ಲಿ ಬಂದ ಸುದ್ದಿಗಳನ್ನು ನಂಬಬೇಡಿ. ಎಕ್ಸ್‌ನಲ್ಲಿ ಬರುವ ಸುದ್ದಿಗಳನ್ನು ಮಾತ್ರ ನಂಬಿ ಎಂದು ಕರೆ ನೀಡಿದ್ದರು.

ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ಗೆ ಬಹಿರಂಗ ಬೆಂಬಲ ಘೋಷಿಸಿದ್ದು ಮಾತ್ರವಲ್ಲದೇ ಭಾರೀ ಪ್ರಮಾಣದಲ್ಲಿ ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಪ್ರತಿ ದಿನ 1 ಮಿಲಿಯನ್‌ ಡಾಲರ್‌ ಭಾರತದ ರೂಪಾಯಿಯಲ್ಲಿ ಹೇಳುವುದಾದರೆ ಸುಮಾರು 8.40 ಕೋಟಿ ರೂ ನೀಡುವುದಾಗಿ ಘೋಷಣೆ ಮಾಡಿದ್ದರು. ದೇಣಿಗೆ ನೀಡಿದ್ದು ಮಾತ್ರವಲ್ಲದೇ ಟ್ರಂಪ್‌ ಪರ ಪ್ರಚಾರ ಸಭೆಯಲ್ಲಿ ಕಾಣಿಸಿಕೊಂಡಿದ್ದರು.

ಅಮೆರಿಕ ಉಳಿಯಬೇಕಾದರೆ ಕಮಲಾ ಹ್ಯಾರಿಸ್‌ ಅವರನ್ನು ಸೋಲಿಸಬೇಕು ಎಂದು ಕರೆ ನೀಡಿದ್ದರು. ಟ್ರಂಪ್‌ ಪರ ಯುವ ಜನತೆಯನ್ನು ಮಸ್ಕ್‌ ಸೆಳೆದಿದ್ದರು. ಇದೆಲ್ಲದರ ಪರಿಣಾಮ ಟ್ರಂಪ್‌ ಈಗ 47ನೇ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.