ಬಾಹ್ಯಾಕಾಶ ನಿಲ್ದಾಣ ತಲುಪಿತು ಕ್ರ್ಯೂ-9 ಮಿಷನ್ – ಅಪ್ಪಿಕೊಂಡು ಸ್ವಾಗತಿಸಿದ ಗಗನಯಾನಿಗಳು

ವಾಷಿಂಗ್ಟನ್‌: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆ ತರುವ ನಿಟ್ಟಿನಲ್ಲಿ ಹಾರಿಸಲಾಗಿದ್ದ ಸ್ಪೇಸ್‌ ಎಕ್ಸ್‌ ಕ್ರ್ಯೂ9 ಮಿಷನ್ (Crew9) ಯಶಸ್ವಿಯಾಗಿ ಅಂತರಿಕ್ಷ ನಿಲ್ದಾಣದಲ್ಲಿ ಲ್ಯಾಂಡ್‌ ಆಗಿದೆ.

ಫಾಲ್ಕನ್ 9 ರಾಕೆಟ್ ಫ್ಲೋರಿಡಾದ ಕೇಪ್ ಕೆನವೆರಲ್‌ನಿಂದ ಶನಿವಾರ ಭಾರತೀಯ ಕಾಲಮಾನ ರಾತ್ರಿ 10:47ಕ್ಕೆ ಉಡಾವಣೆಯಾಗಿತ್ತು. ಸ್ಪೇಸ್‌ ಎಕ್ಸ್ ಕ್ರ್ಯೂ-9 ಮಿಷನ್ (Crew-9 Mission) ಭಾನುವಾರ ಸಂಜೆ ಅಂತರಿಕ್ಷ ನಿಲ್ದಾಣದ ಜೊತೆ ಸಂಪರ್ಕ ಸಾಧಿಸಿತು.

ಡಾಕ್‌ ಆದ ನಂತರ ನಾಸಾ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೊವ್ ಅವರು ಅಂತಾರಾಷ್ಟ್ರೀಯ ನಿಲ್ದಾಣದಲ್ಲಿರುವ (ISS) ಗಗನಯಾನಿಗಳನ್ನು ಅಪ್ಪಿಕೊಂಡರು.

ಫೆಬ್ರವರಿಯಲ್ಲಿ ಹೇಗ್ ಮತ್ತು ಗೋರ್ಬುನೊವ್ ಬಾಹ್ಯಾಕಾಶ ನಿಲ್ದಾಣದಿಂದ ಮರಳುವಾಗ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅವರನ್ನು ಕರೆ ತರುತ್ತಾರೆ.

 

ಜೂನ್ ತಿಂಗಳಲ್ಲಿ 8 ದಿನಗಳ ಬಾಹ್ಯಾಕಾಶ ಯಾತ್ರೆ ತೆರಳಿದ್ದ ಇಬ್ಬರು ಗಗನಯಾತ್ರಿಗಳು ಬೋಯಿಂಗ್ ಸ್ಟಾರ್‌ಲೈನರ್‌ ಬಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಬಾಹ್ಯಾಕಾಶದಲ್ಲೇ ಉಳಿದಿದ್ದಾರೆ. ಕ್ರ್ಯೂ 9 ಮಿಷನ್‌ ಮೂಲಕ ಸುಮಾರು 200 ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತದೆ.