ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ರೈತ ಮುಖಂಡರಿಂದ ತಮಿಳುನಾಡಿನ ಸಿಎಂ ಭೇಟಿ

ಚೆನ್ನೈ: ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಕೇರಳ ರಾಜ್ಯಗಳ ರೈತ ಮುಖಂಡರು ಇಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳ ಬಗ್ಗೆ ಗಮನಸೆಳೆದರು.

ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ಧ ಖಾತ್ರಿಗೊಳಿಸಲು ಕಾನೂನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಕೇಂದ್ರ ಸರ್ಕಾರ ಅರಿಶಿನ ಬೆಳೆಗೆ ಶೇಕಡಾ 5ರಷ್ಟು ಜಿಎಸ್‌ಟಿ ವಿಧಿಸಿರುವುದನ್ನು ರದ್ದು ಮಾಡಬೇಕು. ಅರಿಶಿನ ಬೆಳೆಗೆ 15,000 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಸರ್ಕಾರ ಖರೀದಿ ಕೇಂದ್ರಗಳ ಮೂಲಕ ಖರೀದಿಸುವಂತೆ ಆಗಬೇಕು. ಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಲು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಟಾಟಾ ಸಂಸ್ಥೆಗೆ ಏರ್‌ ಇಂಡಿಯಾ ಅಧಿಕೃತ ಹಸ್ತಾಂತರ

ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಆಯಾ ವರ್ಷದ ಇಳುವರಿ ಆಧರಿಸಿ ಎಫ್‌ಆರ್‌ಪಿ ದರ ರೈತರಿಗೆ ನೀಡುವಂತಾಗಬೇಕು. ಕೇಂದ್ರ ಸರ್ಕಾರ ಖರೀದಿಸುವ ಕನಿಷ್ಠ ಬೆಂಬಲ ಬೆಲೆ ಖರೀದಿ ಅನುದಾನ ಎಲ್ಲಾ ರಾಜ್ಯಗಳಿಗೂ ಸಮನಾಗಿ ಹಂಚಿಕೆ ಮಾಡಿ ಖರೀದಿಸುವಂತೆ ಆಗಬೇಕು ಎಂದು ತಿಳಿಸಿದ್ದಾರೆ.

ಕಾಡಂಚಿನ ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆಗಳು ರೈತರ ಜೀವನ ನಾಶವಾಗುತ್ತಿರುವುದನ್ನು ತಪ್ಪಿಸಲು ಐವತ್ತು ವರ್ಷಗಳ ಹಿಂದೆ ರಚಿತವಾಗಿರುವ ವನ್ಯಜೀವಿ ಸಂರಕ್ಷಣೆ ಕಾಯ್ದೆ ತಿದ್ದುಪಡಿ ಮಾಡಲು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿರುವ ತಮಿಳುನಾಡು ಸಿಎಂ, ರೈತರ ವಿಚಾರದಲ್ಲಿ ತಮಿಳುನಾಡು ಸರ್ಕಾರ ಸದಾ ನಿಮ್ಮ ಜೊತೆ ಇರುತ್ತದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಭಾರತ ಹಿಂದೂ ರಾಷ್ಟ್ರವಾಗುತ್ತಿದೆ, ಜನರಿಗೆ ಅಭದ್ರತೆ ಕಾಡುತ್ತಿದೆ: ಅನ್ಸಾರಿ

ರೈತ ಮುಖಂಡರ ನಿಯೋಗದಲ್ಲಿ ಅರಿಶಿನ ಬೆಳೆಗಾರರ ಸಂಘದ ರಾಷ್ಟ್ರೀಯ ಅಧ್ಯಕ್ಷ ತಮಿಳುನಾಡಿನ ದೈವಸಿಗಾಮಣಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕರ್ನಾಟಕದ ಕುರುಬೂರು ಶಾಂತಕುಮಾರ್, ರಾಷ್ಟ್ರೀಯ ಉಪಾಧ್ಯಕ್ಷ ತೆಲಂಗಾಣದ ನರಸಿಂಹ ನಾಯ್ಡು, ಕೇರಳ ರಾಜ್ಯದ ಪಿ.ಟಿ.ಜಾನ್, ತಮಿಳುನಾಡಿನ ರಾಮಗೌಂಡರ್, ಇಲ್ಲಂಗೂವನ್ ವೆಲಂಗಣಿ, ಎಳಿಲ್ಲನ್ ಕಾಂಚಿಪುರಂ, ಬಾಬು ಕೊಯಮತ್ತೂರು, ಮಾಣಿಕ್ಯಂ ಹುಣಸೂರು, ವಿಮಾಲ್ ಕುಮಾರ ಇತರರು ಇದ್ದರು.

Comments

Leave a Reply

Your email address will not be published. Required fields are marked *