ಇನ್ನಿಂಗ್ಸ್, 202 ರನ್ ಗೆಲುವಿನೊಂದಿಗೆ ಕ್ಲೀನ್ ಸ್ವೀಪ್ – ಭಾರತಕ್ಕೆ 240 ಅಂಕ, ಕೊಹ್ಲಿ ದಾಖಲೆ

ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 202 ರನ್‍ಗಳಿಂದ ಗೆದ್ದು ಭಾರತ 3-0 ಅಂತರದಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ಮೂರನೇ ದಿನದಾಟಕ್ಕೆ 46 ಓವರ್ ಗಳಲ್ಲಿ 132 ರನ್‍ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಆಫ್ರಿಕಾ ಇಂದು ಈ ಮೊತ್ತಕ್ಕೆ 1.5 ಓವರ್ ಗಳಲ್ಲಿ ಕೇವಲ 1 ರನ್ ಸೇರಿಸಿ ಉಳಿದ ಎರಡು ವಿಕೆಟ್ ಕಳೆದುಕೊಂಡಿತು. ಈ ಮೂಲಕ ವಿಶ್ವಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ 240 ಅಂಕಗಳಿಸಿ ಭಾರತ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ಶಮಿ 3 ವಿಕೆಟ್ ಪಡೆದರೆ ಉಮೇಶ್ ಯಾದವ್ ಮತ್ತು ನದೀಂ ತಲಾ 2 ವಿಕೆಟ್ ಪಡೆದರು. ಜಡೇಜಾ ಮತ್ತು ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಲೆಕ್ಕ ಹೇಗೆ ಹಾಕಲಾಗುತ್ತದೆ?

ಕೊಹ್ಲಿ ದಾಖಲೆ:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫಾಲೋ ಆನ್ ಹೇರಿ ಭಾರತದ ಪರ ದಾಖಲೆ ಬರೆದಿದ್ದಾರೆ. ಭಾರತದ 497 ರನ್‍ಗಳಿಗೆ ಜವಾಬು ನೀಡಿದ ದಕ್ಷಿಣ ಆಫ್ರಿಕಾ 3ನೇ ದಿನ 162 ರನ್‍ಗಳಿಗೆ ಆಲೌಟ್ ಆಯ್ತು. ಆಲೌಟ್ ಆದ ಕೂಡಲೇ ಕೊಹ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುವ ಮೊದಲು ದಕ್ಷಿಣ ಆಫ್ರಿಕಾಗೆ ಫಾಲೋ ಆನ್ ಹೇರಿದರು. ಈ ಮೂಲಕ ಭಾರತದ ಪರ ಅತಿ ಹೆಚ್ಚು ಫಾಲೋ ಆನ್ ಹೇರಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕೊಹ್ಲಿ 8ನೇ ಬಾರಿ ಫಾಲೋ ಆನ್ ಹೇರಿದ್ದರೆ, ಈ ಹಿಂದೆ ಮೊಹಮ್ಮದ್ ಅಜರುದ್ದೀನ್ 7 ಬಾರಿ, ಮಹೇಂದ್ರ ಸಿಂಗ್ ಧೋನಿ 5 ಬಾರಿ, ಸೌರವ್ ಗಂಗೂಲಿ 4 ಬಾರಿ ಫಾಲೋ ಆನ್ ಹೇರಿದ್ದರು.

Comments

Leave a Reply

Your email address will not be published. Required fields are marked *