ಗಂಗೂಲಿ ಈಗ ಬಿಸಿಸಿಐ ಕ್ಯಾಪ್ಟನ್ – ಅಮಿತ್ ಶಾ ಪುತ್ರ ಕಾರ್ಯದರ್ಶಿ

– ಮುಂಬೈನಲ್ಲಿ ಕಳೆದ ರಾತ್ರಿ ಸಭೆ
– ಬಿಸಿಸಿಐ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಸಾಧ್ಯತೆ

ನವದೆಹಲಿ: ಭಾರತದ ಕ್ರಿಕೆಟ್ ನಿಂಯತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಮುಂಬೈನಲ್ಲಿ ಭಾನುವಾರ ರಾತ್ರಿ ಕ್ರಿಕೆಟ್ ಬೋರ್ಡ್ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಸೌರವ್ ಗಂಗೂಲಿ ಅವರಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನ ನೀಡಲು ಉಳಿದ ಸದಸ್ಯರು ಒಪ್ಪಿಗೆ ನೀಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಬ್ರಿಜೇಶ್ ಪಾಟೀಲ್ ಮತ್ತು ಸೌರವ್ ಗಂಗೂಲಿ ಮಧ್ಯೆ ಸ್ಪರ್ಧೆ ಇತ್ತು. ಈ ಮಧ್ಯೆ ಭಾನುವಾರ ನಾಟಕೀಯ ಬೆಳವಣಿಗೆ ನಡೆದಿದ್ದು ಅವಿರೋಧವಾಗಿ ಆಯ್ಕೆ ಮಾಡಲು ಸದಸ್ಯರು ಒಲವು ತೋರಿಸಿದ್ದಾರೆ.

ಇಂದು ಚುನಾವಣೆಗೆ ನಾಮತ್ರ ಸಲ್ಲಿಸುವ ಅಂತಿಮ ದಿನವಾಗಿದ್ದು ಅ.23 ರಂದು ಚುನಾವಣೆ ನಡೆಯಬೇಕಿತ್ತು. ಆದರೆ ಸದಸ್ಯರ ನಡುವೆ ಮಾತುಕತೆ ಯಶಸ್ವಿಯಾಗಿದ್ದು ಐದು ವರ್ಷದಿಂದ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಸೌರವ್ ಗಂಗೂಲಿ ಅವರನ್ನು ಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು, ಮಧ್ಯಾಹ್ನ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆಯಿದೆ.

ಗೃಹ ಸಚಿವ ಅಮಿತ್ ಶಾ ಪುತ್ರ ಜೇ ಶಾ ಕಾರ್ಯದರ್ಶಿಯಾಗಿಯೂ, ಕೇಂದ್ರ ಕಾರ್ಪೋರೇಟ್ ಮತ್ತು ವ್ಯವಹಾರಗಳ ಖಾತೆಯ ರಾಜ್ಯ ಸಚಿವ, ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಧುಮಲ್ ಖಜಾಂಜಿಯಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐ ಆಡಳಿತ ಮಂಡಳಿಯನ್ನು 2017ರಲ್ಲಿ ವಜಾಗೊಳಿಸಿತ್ತು. ಬಳಿಕ ಸುಪ್ರೀಂ ಆಡಳಿತಾತ್ಮಕ ಸಮಿತಿಯನ್ನು ನೇಮಿಸಿತ್ತು. ಅಕ್ಟೋಬರ್ 23ರಂದು ಬಿಸಿಸಿಐ ಪದಾಧಿಕಾರಿಗಳಿಗೆ ಆಡಳಿತಾತ್ಮಕ ಸಮಿತಿ ಅಧಿಕಾರ ಹಸ್ತಾಂತರ ಮಾಡಲಿದೆ. ಹೀಗಾಗಿ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ.

Comments

Leave a Reply

Your email address will not be published. Required fields are marked *