ಬೇಕಂತಲೇ ಹೆಣ್ಮಕ್ಕಳ ಮೈ ಮುಟ್ಟುತ್ತಿದ್ದ, ಹಿಂಬಾಲಿಸುತ್ತಿದ್ದ – ಬ್ರಿಜ್‌ ಭೂಷಣ್‌ ವಿರುದ್ಧ 10 ಕಂಪ್ಲೆಂಟ್‌, 2 FIR

– ಕನಿಷ್ಠ 3 ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲು

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌ (WFI) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ (Brij Bhushan Sharan Singh) ವಿರುದ್ಧ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಆರೋಪಗಳ ಆಧಾರದ ಮೇಲೆ ದೆಹಲಿ ಪೊಲೀಸರು 2 ಎಫ್‌ಐಆರ್‌ ಮತ್ತು 10 ದೂರುಗಳನ್ನ ದಾಖಲಿಸಿದ್ದಾರೆ.

ಕುಸ್ತಿಪಟುಗಳ ದೂರುಗಳ ಅನ್ವಯ ದೆಹಲಿಯ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಇದೀಗ ಎಫ್‌ಐಆರ್‌ನಲ್ಲಿ ದೂರುಗಳು ಏನೆಂಬುದು ಬಹಿರಂಗಗೊಂಡಿದೆ. ಎರಡು ಎಫ್‌ಐಆರ್‌ ಪ್ರಕಾರ, ಬ್ರಿಜ್‌ ಭೂಷಣ್‌ ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆಯಿಟ್ಟಿದ್ದರು, ಅನುಚಿತವಾಗಿ‌ ದೇಹ ಸ್ಪರ್ಶಿಸುವುದು, ಹುಡುಗಿಯರ ಎದೆ ಮೇಲೆ ಕೈ ಹಾಕುವುದು, ಮೈ-ಕೈ ಮುಟ್ಟುವುದು, ಅವರನ್ನು ಹಿಂಬಾಲಿಸುವುದು ಸೇರಿದಂತೆ 10 ದೂರುಗಳನ್ನು ದಾಖಲಿಸಲಾಗಿದೆ. ಇದನ್ನೂ ಓದಿ: ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟುಗಳ ವಿರುದ್ಧ FIR; ದೇಶದಲ್ಲಿ ಸರ್ವಾಧಿಕಾರ ಆರಂಭವಾಯ್ತಾ – ಸಾಕ್ಷಿ ಮಲಿಕ್‌ ಪ್ರಶ್ನೆ

ಕಳೆದ ಏಪ್ರಿಲ್‌ 21 ರಂದೇ ದೂರು ದಾಖಲಾಗಿದ್ದು, ಏಪ್ರಿಲ್‌ 28 ರಂದು ಎರಡು FIR ದಾಖಲಾಗಿದೆ. ಭೂಷಣ್‌ ವಿರುದ್ಧ IPC ಸೆಕ್ಷನ್‌ 354, 354 (ಎ), 354 (ಡಿ) ಹಾಗೂ ಸೆಕ್ಷನ್‌ 34ರ ಅಡಿಯಲ್ಲಿ ಕೇಸ್‌ ದಾಖಲಾಗಿದ್ದು, ಕನಿಷ್ಠ 3 ವರ್ಷ ಜೈಲು ಶಿಕ್ಷೆಗೆ ಒಳಪಡಿಸಬಹುದಾಗಿದೆ. ಭೂಷಣ್‌ ತಮ್ಮ ಮೊಣಕಾಲುಗಳು, ಅಂಗೈ ಮೇಲೆ ಮುಟ್ಟುತ್ತಿದ್ದ, ಉಸಿರಾಟ ಅರ್ಥಮಾಡಿಕೊಳ್ಳುವ ನೆಪದಲ್ಲಿ ಎದೆ ಮತ್ತು ಹೊಟ್ಟೆಯ ಮೇಲೂ ಸ್ಪರ್ಶಿಸುತ್ತಿದ್ದ. ತಮ್ಮ ಟೀ ಶರ್ಟ್‌ ಎಳೆದು ಎದೆ ಮೇಲೆ ಕೈ ಹಾಕಿದ್ದ, ತಮ್ಮನ್ನು ತಬ್ಬಿಕೊಳ್ಳುತ್ತಿದ್ದ ಎಂದು ಮಹಿಳಾ ಕುಸ್ತಿಪಟುಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಯುದ್ಧ ಮುಂದುವರಿಸಲಿ – ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ದಾದಾ

ಮೊದಲ ಎಫ್‌ಐಆರ್‌ನಲ್ಲಿ 6 ಒಲಿಂಪಿಯನ್‌ಗಳ ಆರೋಪ ಉಲ್ಲೇಖಿಸಿದರೆ, 2ನೇ ಎಫ್‌ಐಆರ್‌ನಲ್ಲಿ ಅಪ್ರಾಪ್ತೆಯರ ಪೋಷಕರ ದೂರುಗಳನ್ನ ದಾಖಲಿಸಲಾಗಿದೆ. ಭೂಷಣ್‌ ತಮ್ಮನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಿದ್ದ, ಭುಜವನ್ನು ಬೇಕಂತಲೇ ಒತ್ತಿ ಹಿಡಿಯುತ್ತಿದ್ದ, ಅನುಚಿತವಾಗಿ ದೇಹವನ್ನ ಸ್ಪರ್ಶಿಸುತ್ತಿದ್ದ ಎಂದು ಪೋಷಕರು ದೂರು ದಾಖಲಿಸಿದ್ದಾರೆ.

ಕಳೆದವಾರ ನೂತನ ಸಂಸತ್‌ ಭವನದ ಎದುರು ಪ್ರತಿಭಟನೆ ನಡೆಸಲು ಕುಸ್ತಿಪಟುಗಳು ಮುಂದಾದ ನಂತರ ಕುಸ್ತಿಪಟುಗಳ ವಿರುದ್ಧವೂ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.