ಉಕ್ರೇನ್‍ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ರಕ್ಷಣೆಗೆ ನಿಂತ ಸೋನು ಸೂದ್

ಮುಂಬೈ: ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಬಾಲಿವುಡ್ ನಟ ಸೋನು ಸೂದ್ ಮುಂದಾಗಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನು ಮುಂದುವರಿಸಿದೆ. ರಷ್ಯಾ ಹಾಗೂ ಉಕ್ರೇನ್ ಸಂಘರ್ಷದ ನಡುವೆ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಈ ಮಧ್ಯೆ ನಟ ಸೋನು ಸೂದ್ ಆಪತ್ಭಂದವನಂತೆ ಅನೇಕ ವಿದ್ಯಾರ್ಥಿಗಳನ್ನು ರಕ್ಷಿಸಲು ಹೆಜ್ಜೆ ಮುಂದಿಟ್ಟಿದ್ದಾರೆ. ಇನ್ನೂ ಹಲವಾರು ವಿದ್ಯಾರ್ಥಿಗಳು ಸೋನು ಸೂದ್ ಚಾರಿಟಿ ಸಂಸ್ಥೆಯಿಂದ ಸಹಾಯ ಪಡೆದಿರುವ ಬಗ್ಗೆ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸುರಕ್ಷಿತವಾಗಿ ಮನೆಗೆ ತೆರಳಲು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ

ಈ ಮುನ್ನ ಕೋವಿಡ್-19 ಲಾಕ್‍ಡೌನ್ ವೇಳೆ ವಲಸಿಗರಿಗೆ ತಮ್ಮ ಮನೆಗಳಿಗೆ ತೆರಳಲು ಸಹಾಯ ಮಾಡುವ ಮೂಲಕ ಸೋನುಸೂದ್ ಪ್ರಶಂಸೆ ಪಡೆದಿದ್ದರು. ಇದೀಗ ಯುದ್ಧ ಪೀಡಿತ ಉಕ್ರೇನ್‍ನ ಖಾರ್ಕಿವ್ ನಗರದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ವಿದ್ಯಾರ್ಥಿಗಳು ತಮ್ಮ ತಾಯ್ನಾಡಿಗೆ ಸುರಕ್ಷಿತವಾಗಿ ತಲುಪಲು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿರುವ ಸೋನು ಸೂದ್ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದೇ ವಿಚಾರವಾಗಿ ಈ ಮುನ್ನ ಸೋನು ಸೂದ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಸ್ಥಳೀಯ ಟ್ಯಾಕ್ಸಿಗಳನ್ನು ವಿದ್ಯಾರ್ಥಿಗಳಿರುವ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಅವರನ್ನು ಖಾರ್ಕಿವ್‍ನ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಗುತ್ತದೆ. ನಂತರ ಅವರನ್ನು ರೈಲಿನಲ್ಲಿ ಎಲ್ವಿವ್ ನಗರದ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಗುತ್ತದೆ. ಅವರನ್ನು ಪೋಲಿಷ್ ಗಡಿಗೆ ಸಾಗಿಸಲು ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಯುದ್ಧದ ನಡುವೆ ಬಾಂಬ್ ಶೆಲ್ಟರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಉಕ್ರೇನ್‍ನಲ್ಲಿರುವ ನಮ್ಮ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದು, ಈ ಕಠಿಣ ಸಮಯದಲ್ಲಿ ಅದೃಷ್ಟವಶಾತ್ ನಾವು ಅನೇಕ ವಿದ್ಯಾರ್ಥಿಗಳನ್ನು ಗಡಿ ದಾಟಿ ಸುರಕ್ಷಿತ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಸಹಾಯ ಮಾಡಿದ್ದೇವೆ. ಹೀಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರೋಣ, ಅವರಿಗೆ ನಮ್ಮ ಅವಶ್ಯಕತೆ ಇದೆ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.

ವಿದ್ಯಾರ್ಥಿಯೊಬ್ಬರು ಸೋನು ಸೂದ್ ಸಹಾಯ ಕುರಿತಂತೆ ವೀಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸೋನು ಸುದ್ ಅವರು, ಅದು ನನ್ನ ಕೆಲಸ. ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ಇದರಿಂದ ನನಗೆ ಸಂತಸವಾಗಿದೆ. ನಿಮ್ಮೆಲ್ಲರ ಬೆಂಬಲಕ್ಕೆ, ಭಾರತ ಸರ್ಕಾರದಕ್ಕೆ ದೊಡ್ಡ ಧನ್ಯವಾದ ಎಂದು ಪ್ರತಿಕ್ರಿಯಿಸಿದ್ದಾರೆ.

Comments

Leave a Reply

Your email address will not be published. Required fields are marked *