ಕಾಂಗ್ರೆಸ್ ಸಂಸದನ ದೇಶ ವಿಭಜನೆ ಹೇಳಿಕೆ – ಸೋನಿಯಾ ಗಾಂಧಿ ಭಾರತೀಯರ ಕ್ಷಮೆಯಾಚಿಸಲಿ: ಜೋಶಿ ಆಗ್ರಹ

– ಅಧಿವೇಶನದಲ್ಲಿ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ ತರಾಟೆ

ನವದೆಹಲಿ: ದೇಶ ವಿಭಜನೆ ಕೂಗೆಬ್ಬಿಸಿರುವ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ (D.K.Suresh) ವಿರುದ್ಧ ಸಂವಿಧಾನಾತ್ಮಕ ಕ್ರಮ ಕೈಗೊಳ್ಳಬೇಕು ಮತ್ತು ಕಾಂಗ್ರೆಸ್ ಪಕ್ಷ ದೇಶದ ಕ್ಷಮೆ ಕೇಳಬೇಕು ಎಂದು ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಆಗ್ರಹಿಸಿದ್ದಾರೆ.

ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ ಜೋಶಿ ಅವರು, ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ದೇಶ ವಿಭಜನೆ ಹೇಳಿಕೆ ನೀಡುವ ಮೂಲಕ ಭಾರತೀಯ ಸಂವಿಧಾನಕ್ಕೆ, ಡಾ.ಅಂಬೇಡ್ಕರ್‌ಗೆ ಅಪಮಾನ ಎಸಗಿದ್ದಾರೆ. ರಾಷ್ಟ್ರದ ಅಖಂಡತೆಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ಇವರ ವಿರುದ್ಧ ಕಾನೂನಾತ್ಮಕ ಕ್ರಮವಾಗಲೇಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕಲ್ಲು ಹೊಡೆದುಕೊಂಡು ಇದ್ದೋರನ್ನ ಲೋಕಸಭೆಗೆ ಕಳುಹಿಸಿದ್ರೆ ಇನ್ನೇನಾಗುತ್ತೆ: ಡಿ.ಕೆ.ಸುರೇಶ್‌ಗೆ ಹೆಚ್‌ಡಿಕೆ ತಿರುಗೇಟು

ತಮ್ಮ ಪಕ್ಷದ ಸದಸ್ಯ, ಸಂಸದನ ದೇಶ ಒಡೆಯುವ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ದೇಶದ ಕ್ಷಮೆ ಯಾಚಿಸಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ. ದೇಶವನ್ನು ವಿಭಜಿಸುವ ಡಿ.ಕೆ.ಸುರೇಶ್ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಸಂವಿಧಾನ ಮತ್ತು ಬಾಬಾಸಾಹೇಬ್ ಅಂಬೇಡ್ಕರ್‌ಗೆ ಘೋರ ಅವಮಾನ ಮಾಡಿರುವ ಡಿ.ಕೆ.ಸುರೇಶ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಕಾಂಗ್ರೆಸ್‌ಗೆ ಒತ್ತಾಯಿಸುತ್ತೇನೆ. ಕಾಂಗ್ರೆಸ್ ಕ್ರಮ ಕೈಗೊಳ್ಳದೇ ಹೋದಲ್ಲಿ ದೇಶವನ್ನು ಛಿದ್ರಗೊಳಿಸುವ ಅವರ ಹೇಳಿಕೆಗೆ ಕಾಂಗ್ರೆಸ್ ಬೆಂಬಲವೂ ಇದೆ ಎಂದಂತಾಗುತ್ತದೆ ಎಂದು ಸಚಿವ ಜೋಶಿ ಕಾಂಗ್ರೆಸ್ ವಿರುದ್ಧ ಹರಿ ಹಾಯ್ದಿದ್ದಾರೆ. ಇದನ್ನೂ ಓದಿ: ಸಂಸತ್ತಿನಲ್ಲಿ ಸದ್ದು ಮಾಡಿದ ಡಿಕೆ ಸುರೇಶ್ ‌ʼಪ್ರತ್ಯೇಕ ರಾಷ್ಟ್ರʼ ಹೇಳಿಕೆ- ಕಾಂಗ್ರೆಸ್‌ ಕ್ಷಮೆ ಕೇಳುವಂತೆ ಆಗ್ರಹ

ದೇಶವನ್ನು ದಕ್ಷಿಣ ಭಾರತ- ಉತ್ತರ ಭಾರತ ಎನ್ನುವುದು ತಪ್ಪು. ನಾನೂ ಒಬ್ಬ ದಕ್ಷಿಣ ಭಾಗದ ಸಂಸದ. ದೇಶದ ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆ. ದೇಶ ವಿಭಜಿಸುವ ಹೇಳಿಕೆ ನೀಡಿದವರಿಗೆ ತಕ್ಕ ಶಾಸ್ತಿ ಅಗಲೇಬೇಕು ಎಂದು ಸಚಿವ ಜೋಶಿ ಪ್ರತಿಪಾದಿಸಿದರು.

ದೇಶ ಒಡೆಯುವ ನೀತಿ ಕಾಂಗ್ರೆಸ್‌ನ ಪರಂಪರೆಯಾಗಿಬಿಟ್ಟಿದೆ. ಈಗ ಅದೇ ಪಕ್ಷದ ಸಂಸದ, ಅದೂ ಒಬ್ಬ ಉಪ ಮುಖ್ಯಮಂತ್ರಿ ಸಹೋದರನ ದೇಶ ವಿಭಜನೆ ಹೇಳಿಕೆ ಸಂಬಂಧ ತನಿಖೆಗೆ ಎಥಿಕ್ಸ್ ಕಮಿಟಿ ರಚನೆಯಗಬೇಕು ಎಂದು ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಸದನವನ್ನು ಒತ್ತಾಯಿಸಿದರು. ಇದನ್ನೂ ಓದಿ: ನಮ್ಮ ಭವ್ಯ ಭಾರತವನ್ನು ಒಡೆಯುವ ಮಾತು ಯಾರೂ ಆಡಬಾರದು: ಪರಮೇಶ್ವರ್ ತಿರುಗೇಟು