ಯಾರೂ ಪಕ್ಷಕ್ಕೆ ಅನಿವಾರ್ಯವಲ್ಲ- ಸಿದ್ದು ವಿಚಾರದಲ್ಲಿ ಸೋನಿಯಾ ಖಡಕ್ ನಿರ್ಧಾರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಯದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಖಡಕ್ ನಿರ್ಧಾರ ಕೈಗೊಂಡಿದ್ದಾರೆ.

ವಿಪಕ್ಷ ನಾಯಕನ ಸ್ಥಾನ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಎರಡಕ್ಕೂ ರಾಜೀನಾಮೆ ಕೊಟ್ಟ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಅಂಗೀಕರಿಸೋಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮುಂದಾಗಿದ್ದಾರೆ. ಇದರ ಸುಳಿವು ಸಿಕ್ಕ ಸಿದ್ದರಾಮಯ್ಯ ಬಣ ರಾಹುಲ್ ಗಾಂಧಿ ಮೂಲಕ ಮನವೊಲಿಕೆ ಯತ್ನಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯಿಸಿರುವ ಸೋನಿಯಾ, ಪಕ್ಷಕ್ಕೆ ಯಾರೂ ಅನಿವಾರ್ಯ ಅಲ್ಲ. ಕಳೆದ 11 ವರ್ಷದಲ್ಲಿ ಸಿದ್ದರಾಮಯ್ಯರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಈಗ ಬದಲಾವಣೆಯ ಸಮಯ ಬದಲಿ ನಾಯಕತ್ವಕ್ಕೆ ಅವಕಾಶ ಕೊಡೋಣ ಎಂದಿದ್ದಾರೆ. ನಾನು ಮೊದಲ ಬಾರಿ ಎಐಸಿಸಿ ಅಧ್ಯಕ್ಷೆಯಾದಾಗ ದೇಶದಲ್ಲೆಡೆ ಪಕ್ಷದ ಪರಿಸ್ಥಿತಿ ಹೀಗೆ ಇತ್ತು. ಆದರೆ ನಾನು ಅನಿವಾರ್ಯವಾಗಿ ಬದಲಾವಣೆ ಮಾಡಲೇ ಬೇಕಾಯ್ತು. ಆನಂತರ ಪಕ್ಷ ಅಧಿಕಾರಕ್ಕೆ ಬಂತು. ಇಲ್ಲಿ ಯಾರೂ ಅನಿವಾರ್ಯ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಅಲ್ಲಿಗೆ ರಾಹುಲ್ ಗಾಂಧಿ ಮೂಲಕ ಸೋನಿಯ ಗಾಂಧಿಯವರ ಮನವೊಲಿಕೆ ಮಾಡಿ ಮತ್ತೆ ವಿಪಕ್ಷ ನಾಯಕನ ಸ್ಥಾನ ಹಾಗೂ ಸಿಎಲ್ ಪಿ ನಾಯಕನ ಸ್ಥಾನದಲ್ಲಿ ಮುಂದುವರಿಯುವ ಸಿದ್ದರಾಮಯ್ಯ ಆಸೆಗೆ ಸೋನಿಯಗಾಂಧಿ ತಣ್ಣೀರು ಎರಚಿದ್ದಾರೆ. ಇತ್ತ ಹೈಕಮಾಂಡ್ ಹೇಳಿದರೆ ರಾಜೀನಾಮೆ ವಾಪಾಸ್ ಪಡೆಯುತ್ತೇನೆ ಎನ್ನುತ್ತಿದ್ದ ಸಿದ್ದರಾಮಯ್ಯ, ಪಕ್ಷಕ್ಕೆ ಯಾರೂ ಅನಿವಾರ್ಯ ಅಲ್ಲಾ ಅನ್ನೋ ಹೈಕಮಾಂಡ್ ನಿಲುವು ಕಂಡು ಸುಮ್ಮನಾಗಿದ್ದಾರೆ.

Comments

Leave a Reply

Your email address will not be published. Required fields are marked *