ಒಬ್ಬ ಮಂತ್ರಿ ಸತ್ರೆ ಏನೂ ಆಗಲ್ಲ, ಸಾವಿರ ಜನ ಸತ್ತರೆ ಗತಿಯೇನು..? – ಸರ್ಕಾರದ ವಿರುದ್ಧ ಸಾಣೆಹಳ್ಳಿ ಮಠದ ಶ್ರೀಗಳು ಗರಂ

ಚಿತ್ರದುರ್ಗ: ಸಾವಿರಾರು ಜನ ಭಕ್ತರು ಸ್ವೀಕರಿಸುವ ಪ್ರಸಾದವನ್ನು ಪರೀಕ್ಷಿಸದ ಪೊಲೀಸರು, ಕೇವಲ ಓರ್ವ ಮಂತ್ರಿ ಸೇವಿಸುವ ಆಹಾರವನ್ನು ಪರೀಕ್ಷಿಸಿದ್ದು ದುರಂತವೆಂದು ಸಾಣೆಹಳ್ಳಿಯ ತರಳುಬಾಳು ಗುರುಪೀಠ ಶಾಖಾ ಮಠ ಪಂಡಿತಾರಾದ್ಯ ಸ್ವಾಮೀಜಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಚಿತ್ರದುರ್ಗದ ಸಾಣೆಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಭಾಗಿಯಾಗಿದ್ದರು. ರಾತ್ರಿ ಭೋಜನವನ್ನು ಶ್ರೀಮಠದಲ್ಲಿ ಸವಿಯುವ ಮೂಲಕ ಸರ್ಕಾರ ಹಾಗು ಸಾಣೆಹಳ್ಳಿ ಮಠದ ನಡುವೆ ಕುಮಾರಸ್ವಾಮಿ ಪ್ರಮಾಣ ವಚನದ ವೇಳೆ ಅಳಿಸಿ ಹೋಗಿದ್ದ ಸಂಬಂಧವನ್ನು ಮತ್ತೆ ಸರಿಪಡಿಸಲು ಯತ್ನಿಸಿದ್ರು.

ಉಪ ಮುಖ್ಯಮಂತ್ರಿ ಸವಿಯುವ ಆಹಾರದ ಪರೀಕ್ಷೆಯನ್ನು ಮಠದಲ್ಲೂ ಪಾಲನೆ ಮಾಡಿದ ಅಧಿಕಾರಿಗಳ ವಿರುದ್ಧ ಸಾಣೆ ಹಳ್ಳಿ ಶ್ರೀಗಳು ಗುಡುಗಿದ್ದಾರೆ. ಮಂತ್ರಿ ಒಬ್ಬರು ಸತ್ತರೆ ಏನು ಆಗಲ್ಲ. ಸಾವಿರಾರು ಜನ ಭಕ್ತರು ಸತ್ತರೆ ಗತಿ ಏನು ಅಂತ ಪ್ರಶ್ನಿಸಿದ್ರು.

ಅಲ್ಲದೇ ಮತವನ್ನು ಹಾಕುವವರೆಗೂ ಪ್ರಜೆಗಳೆ ಪ್ರಭುಗಳು ಅನ್ನೋ ಈ ರಾಜಕಾರಣಿಗಳು, ಮತ ಕೊಟ್ಟ ಮೇಲೆ ಮತದಾರರೆಲ್ಲ ಇವರಿಗೆ ದಾಸರಾಗಬೇಕಿದೆ ಅಂತ ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸಮ್ಮುಖದಲ್ಲೇ ಸರ್ಕಾರದ ನಡೆಯ ಬಗ್ಗೆ ಟೀಕಿಸಿದ್ರು.

ಜೊತೆಗೆ ಭಾಷಣದ ವೇಳೆ ಪೋಡಿಯಂ ಬಳಕೆ ಸರಿಯಲ್ಲ. ರಾಜಕಾರಣಿಗಳು ಜನರ ಮಧ್ಯೆ ಇರಬೇಕೇ ಹೊರೆತು ಪೋಡಿಯಂ ಮಧ್ಯೆಯಲ್ಲ. ನಮ್ಮ ದೇಶದಲ್ಲಿ ಪೋಡಿಯಂ ಸಂಸ್ಕೃತಿ ಸರಿಯಲ್ಲ. ಈ ಸಂಸ್ಕೃತಿ ಜನರು ಮತ್ತು ರಾಜಕಾರಣಿಗಳ ಸಂಬಂಧವನ್ನು ಬೇರ್ಪಡಿಸಿ ಅನಾಹುತ ಸೃಷ್ಟಿಸಿದೆ. ಈ ಸರ್ಕಾರ, ಮಠಗಳು, ಅಧಿಕಾರಿಗಳು ಅವನತಿಯ ಕಡೆ ಸಾಗುತ್ತಿದ್ದಾರೆ. ಅಭಿವೃದ್ಧಿಯ ಸದಾಶಯ ಎಲ್ಲೂ ಇಲ್ಲ ಅಂತ ಭಾಷಣದ ವೇಳೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಸಮ್ಮುಖದಲ್ಲೇ ಮಾತಿನ ಚಾಟಿ ಬೀಸುವ ಮೂಲಕ ರಾಜಕಾರಿಣಿಗಳ ನಡೆಗೆ ಬೇಸರ ವ್ಯಕ್ತಪಡಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *