ಬುರ್ಖಾ ಧರಿಸಿ ಇಂದೋರ್ ಸೇರಿದ್ದಳು ಹನಿಮೂನ್ ಹಂತಕಿ – ಮದುವೆಗೆ 11 ದಿನ ಮುನ್ನವೇ ಕೊಲೆಗೆ ಪ್ಲ್ಯಾನ್‌!

ಶಿಲ್ಲಾಂಗ್‌: ಮೇಘಾಲಯಕ್ಕೆ (Meghalaya) ಹನಿಮೂನ್‌ಗೆ (Honeymoon) ತೆರಳಿದ್ದಾಗ ಪತಿಯನ್ನು ಹತ್ಯೆಗೈದು ಪೊಲೀಸರ ಅತಿಥಿ ಆಗಿರುವ ಸೋನಮ್‌ (Sonam Raghuvanshi), ಬುರ್ಖಾ ಧರಿಸಿ ಇಂದೋರ್‌ ತಲುಪಿದ್ದಳು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ವಿಚಾರಗಳು ಬಯಲಾಗುತ್ತಿದ್ದು, ರಾಜಾ ರಘುವಂಶಿ ಹತ್ಯೆ ಬಳಿಕ ಸೋನಮ್ ರಹಸ್ಯವಾಗಿ ಇಂದೋರ್‌ನ (Indore) ಫ್ಲ್ಯಾಟ್‌ವೊಂದರಲ್ಲಿ ವಾಸವಾಗಿದ್ದಳು. ಕೊಲೆಯ ರಹಸ್ಯ ಯಾರಿಗೂ ತಿಳಿಬಾರದು ಎಂದು, ಯಾರಿಗೂ ಗೊತ್ತಾಗದಂತೆ ಬುರ್ಖಾ ಧರಿಸಿ ಮೇಘಾಲಯದಿಂದ ಇಲ್ಲಿಗೆ ಬಂದಿದ್ದಳು. ಅಲ್ಲದೇ ಮದುವೆಗೆ 11 ದಿನ ಇರುವಾಗಲೇ ಕೊಲೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂಬುದನ್ನು ತನಿಖೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಪತಿ ಕೊಲೆ ಬಳಿಕ ಇಂದೋರ್‌ನ ಫ್ಲ್ಯಾಟ್‌ನಲ್ಲಿ ವಾಸವಿದ್ದ ಹನಿಮೂನ್ ಹಂತಕಿ

ಇಲ್ಲಿಯವರೆಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿತ್ತು ಎಂದು ಹೇಳಲಾಗುತ್ತಿತ್ತು. ಆದರೆ ಉಳಿದ ಆರೋಪಿಗಳು ಸೋನಮ್‌ ಪ್ರಿಯಕರ ರಾಜ್ ಕುಶ್ವಾಹನ ಸ್ನೇಹಿತರೇ ಆಗಿದ್ದು, ಆತನಿಗೆ ಕೊಲೆಗೆ ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ರಾಜಾ ರಘುವಂಶಿ ಹತ್ಯೆ ಪ್ರಕರಣದ ಐವರು ಆರೋಪಿಗಳಾದ ಸೋನಮ್ ರಘುವಂಶಿ, ಆಕೆಯ ಪ್ರಿಯಕರ ಕುಶ್ವಾಹ, ಆತನ ಸ್ನೇಹಿತರಾದ ಆಕಾಶ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುರ್ಮಿ ​​ಕೃತ್ಯ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಮೇ 23ರಂದು ಪತಿ ರಾಜಾ ರಘುವಂಶಿಯ ಕೊಲೆ ಮಾಡಿದ ಬಳಿಕ ಸೋನಮ್ ಗುಪ್ತವಾಗಿ ಇಂದೋರ್ ಸೇರಿಕೊಂಡಿದ್ದಳು. ಬಳಿಕ ಪ್ರಕರಣ 4 ಆರೋಪಿಗಳ ಪೈಕಿ ಒಬ್ಬನಾದ ವಿಶಾಲ್ ಸಿಂಗ್ ಚೌಹಾನ್ ಮೇ 30ರಂದು ಬಾಡಿಗೆ ಪಡೆದಿದ್ದ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದಳು. ಜೊತೆಗೆ ಸೋನಮ್‌ಗಾಗಿ ಆಕೆಯ ಪ್ರಿಯಕರ ರಾಜ್ 5,000 ರೂ. ಮೌಲ್ಯದ ರೇಷನ್‌ನ್ನು ಆನ್‌ಲೈನ್ ಮೂಲಕ ತರಿಸಿಟ್ಟಿದ್ದ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?
ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಡುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.

ರಾಜಾ ರಘುವಂಶಿಯ ಕೊಲೆ ನಂತರ ಇನ್ನೊಬ್ಬ ಮಹಿಳೆಯನ್ನು ಕೊಂದು ಶವವನ್ನು ಸುಟ್ಟು, ಆಕೆಯನ್ನೇ ಸೋನಮ್ ಎಂದು ನಂಬಿಸಬೇಕೆಂದು ಕೊಂಡಿದ್ದರು. ಸತ್ಯ ಬಯಲಾಗುವವರೆಗೂ ಸೋನಮ್‌ನ್ನು ಎಲ್ಲಿಯಾದರೂ ಅಡಗಿಸಿಡುವ ಯೋಜನೆ ಹಾಕಿಕೊಂಡಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ.

ಜೂ.11ರಂದು ಮೇಘಾಲಯ ಪೊಲೀಸರು ಸೋನಮ್ ಹಾಗೂ ಇನ್ನುಳಿದ ಆರೋಪಿಗಳನ್ನು ಶಿಲ್ಲಾಂಗ್ ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ಐದು ಆರೋಪಿಗಳನ್ನು 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು. ಇದನ್ನೂ ಓದಿ: Honeymoon Murder | ಬೇರೊಂದು ಮಹಿಳೆ ಹತ್ಯೆಗೈದು ಸೋನಮ್ ಶವವೆಂದು ನಂಬಿಸೋಕೆ ಮುಂದಾಗಿದ್ದ ಹಂತಕರು