ಪ್ರೇಯಸಿ ಜೊತೆ ಸೇರಿ ಹೆತ್ತ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿ ಕಾಲು ಮುರಿದ ಮಗ

ಗದಗ: ಮಗನೊಬ್ಬ ಪ್ರೇಯಸಿ ಜೊತೆ ಸೇರಿ ಹೆತ್ತ ತಾಯಿಯನ್ನೇ ಹಿಗ್ಗಾಮುಗ್ಗಾ ಥಳಿಸಿ, ಹಿರಿ ಜೀವದ ಕಾಲುಗಳನ್ನೇ ಮುರಿದ ಪ್ರಕರಣವೊಂದು ಗದಗದಲ್ಲಿ ಬೆಳಕಿಗೆ ಬಂದಿದೆ. ಮಗ ಹಾಗೂ ಆತನ ಪ್ರೇಯಸಿಯ ದೌರ್ಜನ್ಯಕ್ಕೆ ಹಿರಿಜೀವ ನಲುಗಿ ಹೋಗಿದ್ದು, ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ.

ಗದಗ ನಗರದ ಎಸ್.ಎಂ ಕೃಷ್ಣಾ ನಗರದಲ್ಲಿ ಸಿದ್ದಲಿಂಗಯ್ಯ ನಾಗಾವಿಮಠ ತನ್ನ ಪ್ರೇಯಸಿ ಜೊತೆ ಸೇರಿಕೊಂಡು ಹೆತ್ತ ತಾಯಿಯನ್ನೇ ಥಳಿಸಿದ್ದಾನೆ. ವೃದ್ಧಾಪ್ಯದಲ್ಲಿ ನಮ್ಮನ್ನು ಆರೈಕೆ ಮಾಡುತ್ತಾನೆ ಅಂತ ವೃದ್ಧ ದಂಪತಿ ಕಿರಿಯ ಮಗನನ್ನು ಮುದ್ದಾಗಿ ಸಾಕಿದ್ದರು. ಆದರೆ ಆ ಕಿರಿಯ ಪುತ್ರ ತನ್ನ ಪ್ರಿಯತಮೆಯ ಜೊತೆ ಸೇರಿಕೊಂಡು ಹೆತ್ತ ತಾಯಿ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಸಿದ್ದಲಿಂಗಯ್ಯ ನಾಗಾವಿಮಠ ಹಾಗೂ ಆತನ ಪ್ರೇಯಸಿ ಕರುಣೆ ಇಲ್ಲದೇ ಹಿರಿಜೀವದ ಎರಡೂ ಮೊಣಕಾಲನ್ನು ಮುರಿಯೋ ಮೂಲಕ ರಾಕ್ಷಸಿತನ ಮೆರೆದಿದ್ದಾಳೆ. ಪುತ್ರ, ಪ್ರೇಯಸಿ ಹೊಡೆತಕ್ಕೆ ಜಿಮ್ಸ್ ಆಸ್ಪತ್ರೆಯಲ್ಲಿ ವೃದ್ಧೆ ತಾಯಿ ಪ್ರೇಮವ್ವ ಕಣ್ಣೀರು ಹಾಕುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ನಡೆದು ನಾಲ್ಕು ದಿನಗಳಾಗಿದ್ದು, ಈಗಾಗಲೇ ವೃದ್ಧೆ ಪ್ರೇಮವ್ವ ದೂರನ್ನು ನೀಡಿದ್ದಾರೆ. ಇಷ್ಟಾದರೂ ಸಹ ದೂರು ದಾಖಲಿಸಿಕೊಂಡ ಗದಗ ಗ್ರಾಮೀಣ ಪೊಲೀಸರು ಕಿರಾತಕ ಪುತ್ರ ಹಾಗೂ ಪ್ರೇಯಸಿಯನ್ನು ಬಂಧಿಸಿಲ್ಲ. ದೂರು ದಾಖಲು ಮಾಡಿಕೊಳ್ಳುವ ವೇಳೆ ಗದಗ ಗ್ರಾಮೀಣ ಪೊಲೀಸರೂ ಸಹ ಅಮಾನವೀಯ ವರ್ತನೆ ಮಾಡಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಿಕೊಳ್ಳದ ಗದಗ ಗ್ರಾಮೀಣ ಪಿಎಸ್‍ಐ ಮಲ್ಲಿಕಾರ್ಜುನ, ನೀನು ಮೊದ್ಲು ಆಸ್ಪತ್ರೆಗೆ ಹೋಗು ಅಂತ ಗದರಿಸಿದ್ದಾರಂತೆ.

ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡಿದರೂ ದೂರು ದಾಖಲಿಸಿಕೊಳ್ಳದ ಪೊಲೀಸರು, ವೃದ್ಧೆಗೆ ಹೆದರಿಸಿ ಕಿರಾತಕರಿಗೆ ಮನೆ ಬೀಗ ಕೊಡಿಸಿದ್ದಾರೆ. ಪೊಲೀಸರ ಅಮಾನವೀಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *