ಶಾಲೆ ನಿರ್ಮಾಣಕ್ಕೆ ತಂದೆ ನೀಡಿದ ಜಮೀನನ್ನು ವಾಪಸ್ಸು ಕೇಳ್ತಿರುವ ಮಗ

– ಬೀದಿಯಲ್ಲೇ ಪಾಠ ಕಲಿಯುತ್ತಿರುವ ವಿದ್ಯಾರ್ಥಿಗಳು

ಬೆಳಗಾವಿ/ಚಿಕ್ಕೋಡಿ: 70 ವರ್ಷದ ಹಳೆಯ ಶಾಲೆ ಭೂ ದಾನಿ ಒಬ್ಬರು ಜಮೀನು ದಾನ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುವು ಮಾಡಿದ್ರು. ಆದ್ರೆ ಭೂದಾನಿ ಮಗ ಬಂದು ಶಾಲೆಯ ಜಮೀನು ಇಲ್ಲಿ ಬರಲ್ಲ ನಿಮ್ಮ ಜಮೀನು ಬೇರೆಡೆಗೆ ಬರುತ್ತೆ ಎಂದು ಶಾಲೆಯ ರಿಪೇರಿ ಕೆಲಸವನ್ನ ಸ್ಥಗಿತಗೊಳಿಸಿದ್ದಾರೆ. ಪರಿಣಾಮ ಮಕ್ಕಳು ಬೀದಿಯಲ್ಲಿ ಪಾಠ ಕಲಿಯುವಂತಾಗಿದೆ.

ಶಾಲಾ ರಿಪೇರಿಗೆಂದು ತೆಗೆದ ಸರ್ಕಾರಿ ಶಾಲೆಯನ್ನು ಜಾಗದ ಮಾಲೀಕರು ರಿಪೇರಿ ಮಾಡಲು ಬಿಡದ ಪರಿಣಾಮ ಬೀದಿಯಲ್ಲೆ ಮಕ್ಕಳು ಪಾಠ ಕಲಿಯುವಂತ ಪರಿಸ್ಥಿತಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೆಮಲಾಪುರ ಗ್ರಾಮದಲ್ಲಿ ನಿರ್ಮಾಣವಾಗಿದೆ. 1951ರಲ್ಲಿ ತೋಟದ ಪ್ರದೇಶದಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಸದ್ಯ 109 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಟ್ಟು 7 ಕೊಠಡಿಗಳಿದ್ದು, 4 ಕೊಠಡಿಗಳನ್ನು ರಿಪೇರಿ ಮಾಡಲು ತೆಗೆದಿದ್ದಾರೆ. ಆದರೆ ಶಾಲೆಗೆ ದಾನ ಕೊಟ್ಟಿರುವ ಜಾಗದ ಮಾಲೀಕ ಮಲ್ಲಯ್ಯ ಮಠಪತಿ ಮಾತ್ರ ಶಾಲೆ ರಿಪೇರಿ ಮಾಡಲು ವಿರೋಧಿಸುತ್ತಿದ್ದಾರೆ.

ಮಲ್ಲಯ ಮಠಪತಿ ತಂದೆ ನಿರುಪಾದಯ್ಯ 10 ಗುಂಟೆ ಜಾಗವನ್ನು ಶಾಲೆ ನಿರ್ಮಾಣಕ್ಕೆ ದಾನ ಮಾಡಿದ್ದರು. 69 ವರ್ಷಗಳವರೆಗೂ ಶಾಲೆ ಚೆನ್ನಾಗಿಯೇ ನಡೆದಿದೆ. ಶಾಲಾ ಹಂಚುಗಳು ಹಾಗೂ ಮೇಲ್ಛಾವಣಿ ಹಾಳಾದ ಹಿನ್ನೆಲೆ 2017ರಲ್ಲಿ ರಿಪೇರಿ ಮಾಡಲು ತೆಗೆದ ಬಳಿಕ ಇಂದಿನವರೆಗೂ ರಿಪೇರಿ ಮಾಡಲು ಬಿಡದೇ ತಕರಾರು ಮಾಡುತ್ತಿದ್ದಾರೆ. ಪರಿಣಾಮ ಮಕ್ಕಳು ಕೊಠಡಿಗಳಿಲ್ಲದೆ ಶಾಲೆ ಆವರಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಶಾಲೆಗೆ ಹೆಚ್ಚುವರಿಯಾಗಿ 3 ಗುಂಟೆ ಜಮೀನು ಬಂದಿದೆ ಆ ಕಾರಣಕ್ಕಾಗಿ ಜಮೀನು ಮಾಲೀಕ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದೆಡೆ ಜಮೀನು ಮಾಲೀಕ ಮಲ್ಲಯ್ಯ ಮಠಪತಿಯನ್ನು ಕೇಳಿದರೆ ನಾವು ಜಮೀನು ಕೊಟ್ಟಿದ್ದು ನಿಜ, ಆದರೆ ಬೇರೆಡೆಗೆ ಜಮೀನು ನೀಡಲಾಗಿದೆ. ಸರ್ಕಾರಿ ಶಾಲೆ ಇರುವ ಚೆಕಬಂದಿ ಹುಡುಕಿ ಶಾಲೆಯನ್ನು ಅಲ್ಲಿ ಕಟ್ಟಿಕೊಳ್ಳಿ. ಈಗ ಈ ಶಾಲೆ ನನ್ನ ಜಾಗವನ್ನು ಅತಿಕ್ರಮಣ ಮಾಡಿದೆ ಎಂದು ಹೇಳುತ್ತಾರೆ.

ಜಮೀನು ವಿವಾದ ಬಗೆ ಹರಿಸುವಂತೆ ರಾಯಬಾಗ ತಹಶೀಲ್ದಾರಗೆ ಇಲ್ಲಿನ ಶಿಕ್ಷಕರು ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನ ಮಾತ್ರ ಆಗಿಲ್ಲ. ಇದುವರೆಗೂ ಬಂದು ಸಮಸ್ಯೆಯನ್ನು ಕೇಳಿಲ್ಲ ಎಂದು ಇಲ್ಲಿನ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *