ದಕ್ಷಿಣಕಾಶಿ ಸೋಂಪುರದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ

ಚಿಕ್ಕಮಗಳೂರು: ದಕ್ಷಿಣಕಾಶಿ ಎಂದೇ ಪ್ರಸಿದ್ಧಿಯಾಗಿರುವ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಸೋಂಪುರ ಗ್ರಾಮದ ಸೋಮೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ. ರಥಬಲಿ, ಘಟಿಕಾಪೂಜೆ, ಮಂಗಳಾಷ್ಟಕ, ರಥಾರೋಹಣ ಸೇರಿದಂತೆ 12.30ರಿಂದ 1.15ರವರೆಗೆ ಸೋಮೇಶ್ವರ ಸ್ವಾಮಿಯ ರಥೋತ್ಸವ ವಿಜೃಂಬಣೆಯಿಂದ ನಡೆದಿದೆ. ಜಾತ್ರಾ ಮಹೋತ್ಸವದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.

ದಕ್ಷಿಣಕಾಶಿ ಎಂದೇ ಖ್ಯಾತಿಯಾಗಿ ಶಿಲಾಮಯವಾಗಿ ಕಟ್ಟಿರುವ ಪುರಾಣ ಪ್ರಸಿದ್ಧ ತ್ರಿಮೂರ್ತಾತ್ಮಕ ಸೋಮೇಶ್ವರಸ್ವಾಮಿ ದೇಗುಲದಲ್ಲಿ ಸೃಷ್ಟಿ, ಸ್ಥಿತಿ, ಸಂಹಾರಕರ್ತರಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರ ಕೂಡಿ ಉದ್ಭವಿಸಿದ ಜ್ಯೋತಿರ್ಲಿಂಗ ಸ್ವರೂಪದ ಮೂರ್ತಿಯು ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾನೆ. ಈ ದಿವ್ಯ ಲಿಂಗ 10 ಅಂಗುಲ ಎತ್ತರ ಹಾಗೂ 15 ಅಂಗುಲ ಸುತ್ತಳತೆಯಿಂದ ಕೂಡಿದ್ದು ಕೃಷ್ಣವರ್ಣದ್ದಾಗಿದೆ. ಶಿವಲಿಂಗದಲ್ಲಿ ತ್ರಿಮೂರ್ತಿಗಳು ವೃಷಭಾರೂಢವಾಗಿ ಮೂರು ತಲೆ ಹಾಗೂ ನಾಲ್ಕು ಭುಜಗಳನ್ನು ಹೊಂದಿ, ಕೈಯಲ್ಲಿ ಶಂಖ, ಢಮರುಗ, ಜಪಮಾಲೆಗಳನ್ನು ಹಿಡಿದು ಅವಿರ್ಭವಿಸುವಂತಿರುವ ಆಕರ್ಷಕ ಸುಂದರ ಮೂರ್ತಿ ನೋಡುಗರನ್ನು ಆಕರ್ಷಿಸುತ್ತಿದೆ.

ಈ ದೇವಾಲಯವನ್ನು 12ನೇ ಶತಮಾನದಲ್ಲಿ ಚೋಳರ ನಿರ್ಮಿಸಿದ್ದು ಎಂಬುದನ್ನು ಇಲ್ಲಿನ ಶಾಸನಗಳೇ ಹೇಳುತ್ತವೆ. ಮಾತೃಹತ್ಯಾ ದೋಷದಿಂದ ಚಿಂತಿತನಾಗಿದ್ದ ಪರಶುರಾಮ ಸಕಲ ತೀರ್ಥಗಳಲ್ಲಿ ಮಿಂದು ಇಲ್ಲಿ ಪುಣ್ಯ ಸ್ನಾನ ಮಾಡಿ ತಪಸ್ಸಿನಲ್ಲಿ ಮಗ್ನನಾಗಿದ್ದ. ಹಾಗಾಗಿ, ಈ ಪುರಾಣ ಪುಣ್ಯ ಕ್ಷೇತ್ರವಾದ ಸೋಂಪುರವನ್ನು ಜಮದಗ್ನಿ ಹಾಗೂ ಪರಶುರಾಮ ಮಹರ್ಷಿಗಳ ತಪೋ ಭೂಮಿ ಎಂದು ಇತಿಹಾಸದ ಪುಟ ಸೇರಿದೆ. ಇಲ್ಲಿ ಪಶ್ಚಿಮಾಭಿಮುಖವಾಗಿ ಭದ್ರಾ ನದಿ ಹರಿಯುತ್ತಿದ್ದು, ಸೋಮೇಶ್ವರಸ್ವಾಮಿಯ ದೃಷ್ಠಿಯೂ ನದಿ ಮೇಲೆ ಬೀಳುತ್ತಿದೆ. ಇಲ್ಲಿ ಸ್ನಾನ ಮಾಡಿದರೆ ಜನ್ಮ-ಜನ್ಮಗಳ ಪಾಪವೂ ಕಳೆದು ಹೋಗುತ್ತೆ ಎನ್ನುವುದು ಭಕ್ತರ ನಂಬಿಕೆ. ಪ್ರತಿದಿನ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬಂದು ಇಲ್ಲಿ ಸ್ನಾನ ಮಾಡಿ ತಮ್ಮ ಪಾಪಗಳನ್ನು ಕಳೆದುಕೊಳ್ತಾರೆ. ಜಿಲ್ಲೆಯ ತರೀಕೆರೆ ತಾಲೂಕಿನಿಂದ 15 ಕಿ.ಮೀ. ದೂರವಿದೆ. ಭದ್ರಾ ನದಿ ದಂಡೆಯ ಮೇಲೆ ಐದು ಶಿವನ ದೇವಾಲಯಗಳಿದ್ದು. ಪ್ರತಿಯೊಂದಕ್ಕೂ 18 ಮೈಲಿ ಅಂತರ ಎನ್ನುವುದು ವಿಶೇಷ. ಕಳಸದ ಕಳಸೇಶ್ವರ, ಖಾಂಡ್ಯದ ಮಾರ್ಕಾಂಡೇಶ್ವರ, ಹೆಬ್ಬೆಯ ಭವಾನಿ ಶಂಕರ, ಭದ್ರಾವತಿಯ ಕೂಡ್ಲಿ ಸಮೀಪದ ಸಂಗಮೇಶ್ವರ ಹಾಗೂ ಸೋಂಪುರದ ಸೋಮೇಶ್ವರ. ಈ ಐದು ದೇವಸ್ಥಾನಗಳಲ್ಲಿ ಈ ಸೋಮೇಶ್ವರ ಸ್ವಾಮಿಗೆ ಅಗ್ರ ಸ್ಥಾನ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಏಕೆಂದರೆ ಹಿಂದಿನ ಕಾಲದಲ್ಲಿ ಈ ಕ್ಷೇತ್ರ ನ್ಯಾಯ-ಪಂಚಾಯ್ತಿಗೆ ಹೆಸರಾಗಿತ್ತು.

ಇಂತಹ ಇತಿಹಾಸ ಪ್ರಸಿದ್ಧ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ 10 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ದೇವಾಲಯದ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡಿದ್ದ ಭಕ್ತರು ಭದ್ರೆಯ ಒಡಲಲ್ಲಿ ಮಿಂದು ಸೋಮೇಶ್ವರ ಸ್ವಾಮಿಯ ತೇರನ್ನ ಎಳೆದು ಸಂಭ್ರಮಿಸಿದರು. ಜಾತ್ರಾ ಮಹೋತ್ಸವದಲ್ಲಿ ಶಾಸಕ ಡಿ.ಎಸ್.ಸುರೇಶ್, ಮಾಜಿ ಜಿಪಂ ಅಧ್ಯಕ್ಷೆ ಚೈತ್ರ ಮಾಲತೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷರು ಅನ್ನಸಂತರ್ಪಣೆಯಲ್ಲಿ ಭಕ್ತರಿಗೆ ಊಟ ಬಡಿಸಿ ದೇವರ ಸೇವೆಗೈದಿದ್ದಾರೆ.

Comments

Leave a Reply

Your email address will not be published. Required fields are marked *