‘ಯಾವನ್ ಬೈತಾನೆ ಅವನ್ ಮುಖಕ್ಕೆ ಉಗಿಯಲ್ವಾ’ – ಎಸ್‍ಪಿ ವಿರುದ್ಧ ಸೋಮಣ್ಣ ಗರಂ

ತುಮಕೂರು: ಸಿದ್ದಗಂಗಾ ಮಠದ ಒಳಗೆ ಸಚಿವ ಸೋಮಣ್ಣ ಕಾರನ್ನು ಬಿಟ್ಟಿದ್ದಕ್ಕೆ ರಾಮನಗರ ಎಸ್‍ಪಿ ಅನೂಪ್ ಶೆಟ್ಟಿ ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ತಿಳಿದು ಸೋಮಣ್ಣ ಅವರು ಯಾವನ್ ಬೈತಾನೆ ಅವನ್ ಮುಖಕ್ಕೆ ಉಗಿಯಲ್ವಾ ಎಂದು ಎಸ್‍ಪಿ ವಿರುದ್ಧ ಗರಂ ಆಗಿದ್ದಾರೆ.

ಮಠದಿಂದ ಹೊರಬರುವ ವೇಳೆ ಎಸ್‍ಪಿ ಅನೂಪ್ ಶೆಟ್ಟಿ ತಮ್ಮ ಕಾರನ್ನು ಒಳ ಬಿಟ್ಟಿದ್ದಕ್ಕೆ ಸಿಬ್ಬಂದಿಗೆ ಬೈದಿರುವ ಬಗ್ಗೆ ಸೋಮಣ್ಣ ಅವರು ಪ್ರತಿಕ್ರಿಯಿಸಿದರು. ನಿಮ್ಮ ಕಾರು ಬಿಟ್ಟಿದ್ದಕ್ಕೆ ಎಸ್‍ಪಿ ಅವರು ಬೈಯ್ಯುತ್ತಿದ್ದಾರೆ ಎಂದು ಹೇಳಿದಾಗ, “ಯಾವನ್ ಬೈತಾನೆ ಅವನ್ ಮುಖಕ್ಕೆ ಉಗಿಯಲ್ವಾ” ಎಂದು ಕಿಡಿಕಾರಿದರು. ಇದನ್ನೂ ಓದಿ: ‘ ಬಿಡ್ಬಾರ್ದು ಅಂದ್ರೆ ಬಿಡ್ಬಾರ್ದು, ಗೊತ್ತಾಗಲ್ವಾ ನಿಮ್ಗೆ’ -ಸೋಮಣ್ಣ ಕಾರು ಬಿಟ್ಟಿದ್ದಕ್ಕೆ ಪೊಲೀಸರ ಮೇಲೆ ಎಸ್‍ಪಿ ಗರಂ

“ನಮ್ಮವರದ್ದೇ ಸ್ವಲ್ಪ ಜಾಸ್ತಿ, ಎಸ್‍ಪಿ ಅವರಿಗೆ ಮನವರಿಕೆ ಮಾಡ್ತೀನಿ. ಎಲ್ಲಿ ಹೋದರು ಅವರು? ಅವರೊಂದಿಗೆ ಮಾತನಾಡುತ್ತೇನೆ. ನೀವು ಬೇಜಾರಾಗಬೇಡಿ” ಎಂದು ಹೇಳಿ ಸೋಮಣ್ಣ ಅವರು ಕಾರಿನಲ್ಲಿ ಮಠದಿಂದ ತೆರಳಿದರು.

ಸಚಿವ ಸೋಮಣ್ಣ ಅವರ ಕಾರನ್ನು ಮಠದ ಒಳಗೆ ಬಿಟ್ಟಿದಕ್ಕೆ ಪೊಲೀಸರ ಸಿಬ್ಬಂದಿ ಮೇಲೆ ಎಸ್‍ಪಿ ಅನೂಪ್ ಶೆಟ್ಟಿ ರೇಗಾಡಿದ್ದಾರೆ. ಮಠದ ಎರಡನೇ ಗೇಟ್‍ನಲ್ಲಿ ಎಸ್‍ಪಿ ಅವರು ಸಿಬ್ಬಂದಿ ಮೇಲೆ ಗರಂ ಆಗಿದ್ದಾರೆ. “ಬ್ಯಾಡ್ಜ್ ಕಾಣಿಸುತ್ತಾ ನಿನಗೆ. ಒಂದು ರಿಹರ್ಸಲ್‍ಗೆ ಬರಲ್ಲ. ಒಂದು ಬೋರ್ಡ್ ಮೀಟಿಂಗ್‍ಗೆ ಬರೋ ಯೋಗ್ಯತೆ ಇಲ್ಲ ನಿಮಗೆ. ಟೈಮ್ ಪಾಸ್ ಮಡೋಕೆ ಬರುತ್ತೀರಾ” ಇಲ್ಲಿ ಎಂದು ಬೈದಿದ್ದಾರೆ.

“ಮೂರು ದಿನದಿಂದ ಏನು ಕಸ ಗುಡಿಸುತ್ತೀದ್ದೇವಾ ನಾವು ಇಲ್ಲಿ. ಅಯೋಗ್ಯ…. ಇನ್‍ಚಾರ್ಜ್ ಯಾಕೆ ಹಾಕಿದ್ದಾರೆ? ಎಸ್‍ಪಿ ಯಾಕೆ ಹಾಕಿದ್ದಾರೆ? ಅರ್ಥ ಮಾಡಿಕೊಳ್ಳಿ ನಿಮ್ಮ ಯೊಗ್ಯತೆ ಇದ್ದರೆ. ನಮ್ಮನ್ಯಾಕೆ ಕರೆಸುತ್ತೀರಾ. ನಮಗೆ ಮಾಡೋಕೆ ಕೆಲಸವಿಲ್ವಾ? 10 ಸಲ ಹೇಳಿದ್ದೇನೆ ಗಾಡಿ ಬಿಡಬೇಡಿ ಅಂತ. ಬಿಡಬಾರದು ಅಂದರೆ ಬಿಡಬಾರದು, ಗೊತ್ತಾಗಲ್ವಾ ನಿಮಗೆ? ಯಾವ ಗಾಡಿ ಬರುತ್ತೆ ಒಳಗೆ” ಎಂದು ಪ್ರಶ್ನಿಸಿ ಸಚಿವ ಸೋಮಣ್ಣ ಅವರ ಕಾರು ಮಠದ ಒಳಗೆ ಬಿಟ್ಟ ಸಿಬ್ಬಂದಿಗೆ ಎಸ್‍ಪಿ ಅನೂಪ್ ಶೆಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.  ಇದನ್ನೂ ಓದಿ: ರೈತರ ಖಾತೆಗೆ 12 ಸಾವಿರ – ಬೆಂಗಳೂರು ಬದಲು ತುಮಕೂರಿನಲ್ಲೇ ಕಾರ್ಯಕ್ರಮ ಯಾಕೆ?

ಪ್ರಧಾನಿ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಕಳೆದ ಮೂರು ದಿನಗಳಿಂದ ವಿಶೇಷ ಭದ್ರತಾ ಪಡೆ(ಎಸ್‍ಪಿಜಿ) ಟೀಂ ಮೊಕ್ಕಾಂ ಹೂಡಿದೆ. ಸಮಾವೇಶ ನಡೆಯುವ ಕಾಲೇಜು ಆವರಣದ ಸಂಪೂರ್ಣ ಉಸ್ತುವಾರಿ ಎಸ್‍ಪಿಜಿ ನೋಡಿಕೊಳ್ಳುತ್ತಿದೆ. ವೇದಿಕೆ, ಸಮಾವೇಶದ ಗಣ್ಯರು, ಆಸನದ ವ್ಯವಸ್ಥೆ, ಮೋದಿ ಅವರ ಜೊತೆ ಯಾರು ವೇದಿಕೆ ಮೇಲೆ ಕುಳಿತುಕೊಳ್ಳಬೇಕು ಅಂತ ಎಸ್‍ಪಿಜಿ ನಿರ್ಧಾರ ಮಾಡುತ್ತದೆ.

ಸಮಾವೇಶಕ್ಕೆ ಸಂಪೂರ್ಣವಾಗಿ ಕಪ್ಪು ವಸ್ತ್ರ ನಿಷೇಧ ಮಾಡಲಾಗಿದೆ. ಪೊಲೀಸರನ್ನು ಕೂಡಾ ಎಸ್‍ಪಿಜಿ ತಪಾಸಣೆ ಮಾಡಿ ಸಮಾವೇಶದ ಜಾಗಕ್ಕೆ ಬಿಡಲಾಗುತ್ತಿದೆ. ಸ್ಥಳೀಯ ಪೊಲೀಸರು ಕೇವಲ ಹೊರಗಿನ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಉಳಿದ ಸಂಪೂರ್ಣ ಭದ್ರತೆ ಎಸ್‍ಪಿಜಿ ನೋಡಿಕೊಳ್ಳುತ್ತಿದೆ.

Comments

Leave a Reply

Your email address will not be published. Required fields are marked *