3 ಗುಂಡು ಹೊಕ್ಕಿದ್ರೂ ಎದೆಗುಂದದ ಯೋಧ – ಗಾಯ ಮಾಸುವ ಮುನ್ನವೇ ಗನ್ ಹಿಡಿದ ಧೀರ

ಗದಗ: ಬರೋಬ್ಬರಿ 3 ಗುಂಡು ದೇಹ ಹೊಕ್ಕಿ, 17 ದಿನ ಕೋಮಾಕ್ಕೆ ಜಾರಿದ ಯೋಧರೊಬ್ಬರು ಇದೀಗ ತಾನೇ ಚೇತರಿಸಿಕೊಳ್ಳುತ್ತಿದ್ದಂತೆ ಮತ್ತೆ ಕರ್ತವ್ಯಕ್ಕೆ ಹಿಂತಿರುಗಿದ್ದಾರೆ.

ಗದಗ ಜಿಲ್ಲೆಯ ಹಾತಲಗೇರಿ ಗ್ರಾಮದ ಯೋಧ ಶ್ರೀಕಾಂತ್ ಕರಿ ತಾಯ್ನಾಡಿನ ಪ್ರೀತಿ ಎಂಥವರನ್ನು ನಿಬ್ಬೇರಗಾಗಿಸುತ್ತದೆ. ಒಮ್ಮೆ ತಾಯ್ನಾಡ ರಕ್ಷಣೆಗೆ ಪಣ ತೊಟ್ಟವರ ರಕ್ತದ ಕಣ ಕಣದಲ್ಲೂ ದೇಶಪ್ರೇಮ ತುಂಬಿ ತುಳುಕುತ್ತದೆ ಎನ್ನುವುದನ್ನು ತೋರಿಸುತ್ತದೆ.

18 ವಯಸ್ಸಿನಲ್ಲೇ ಸೈನ್ಯಕ್ಕೆ ಸೇರಿದ ಶ್ರೀಕಾಂತ್ ಕರಿ ಬರೋಬ್ಬರಿ 18 ವರ್ಷಗಳಿಂದ ದೇಶ ಸೇವೆಯಲ್ಲಿ ನಿರತರಾಗಿದ್ದಾರೆ. ಕಳೆದ 6 ತಿಂಗಳ ಹಿಂದೆ ಜಮ್ಮು-ಕಾಶ್ಮೀರದ ಶೋಪಿಯಾನ್‍ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದ ಕಾರ್ಯಾಚರಣೆಯಲ್ಲಿ ಇವರು ಭಾಗವಹಿಸಿದ್ದರು. ಆದರೆ ಈ ಸೆಣಸಾಟದಲ್ಲಿ ಸ್ವತಃ ಶ್ರೀಕಾಂತ್‍ಗೆ ಮೂರು ಗುಂಡು ತಗುಲಿದ್ದವು.

ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ಶ್ರೀಕಾಂತ್ ಕರಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಕಣ್ಣು ಮುಚ್ಚಿದ್ದ ಶ್ರೀಕಾಂತ್ ಬರೋಬ್ಬರಿ 17 ದಿನ ಕೋಮಾದಲ್ಲಿದ್ದರು. ಅಲ್ಲದೇ ಈ ವಿಷಯವನ್ನು ಶ್ರೀಕಾಂತ್ ಕುಟುಂಬಸ್ಥರಿಗೂ ಕೂಡ ತಿಳಿಸಿರಲಿಲ್ಲ.

17 ದಿನಗಳ ಕೋಮಾದಿಂದ ಮರಳಿ ಚಿಕಿತ್ಸೆ ಪಡೆದಿದ್ದ ಶ್ರೀಕಾಂತ್ ಅವರನ್ನು ಸೈನ್ಯ ಎರಡು ತಿಂಗಳು ರಜೆ ಮಂಜೂರು ಮಾಡಿ ಸ್ವಗ್ರಾಮಕ್ಕೆ ಮರಳುವಂತೆ ಸೂಚಿಸಿದಾಗಲೇ ಮನೆಯವರಿಗೆ ವಿಚಾರ ಗೊತ್ತಾಗಿದೆ. ಮೊನ್ನೆ ನಡೆದ ಪುಲ್ವಾಮಾ ದಾಳಿಯ ಸುದ್ದಿ ಯೋಧ ಶ್ರೀಕಾಂತ್ ಕಿವಿಗೆ ಬಿದ್ದಿದ್ದೇ ತಡ ಮತ್ತೆ ಸೇನೆಯತ್ತ ಹೊರಟಿದ್ದಾರೆ.

ಈ ವೇಳೆ ಮನೆಯಲ್ಲಿ ತಾಯಿ, ಪತ್ನಿ ಅಡ್ಡಿ ಪಡಿಸಿದರೂ ಕೂಡ ಮತ್ತೆ ಭಾರತಾಂಬೆಯ ಸೇವೆಗೆ ಧಾವಿಸಿದ್ದಾರೆ. ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹೋರಾಡಿದ ಇವರಿಗೆ ಸೇನೆ ಸೇನಾ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತ ವೀರ ಮತ್ತು ಕೆಚ್ಚೆದೆಯ ಯೋಧರು ದೇಶದ ಗಡಿಯಲ್ಲಿರೋದ್ರಿಂದಲೇ ಇಂದು ನಾವು ಇಲ್ಲಿ ನೆಮ್ಮದಿಯಾಗಿದ್ದೇವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *