ಹಾಸ್ಟೆಲ್ ವಿದ್ಯಾರ್ಥಿಗಳು ಸೆಲ್ಫೀ ತೆಗೆದು ಗ್ರೂಪ್‍ಗೆ ಹಾಕ್ಬೇಕಂತೆ – ಸಮಾಜಕಲ್ಯಾಣ ಇಲಾಖೆಯ ಆದೇಶಕ್ಕೆ ಪೋಷಕರ ತರಾಟೆ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಆದೇಶ ವಸತಿ ನಿಲಯದ ಬಾಲಕಿಯರಿಗೆ ತಲೆ ನೋವಾಗಿ ಪರಿಣಮಿಸಿದೆ. ಹೆಸರಿಗೆ ಸಮಾಜ ಕಲ್ಯಾಣ ಇಲಾಖೆ. ಆದರೆ ಇಲಾಖೆ ಆದೇಶ ಸಮಾಜವೇ ಪ್ರಶ್ನೆ ಮಾಡುವಂತಿದೆ.

ಹೌದು. ವಸತಿ ನಿಲಯದ ಬಾಲಕ, ಬಾಲಕಿಯರು ಸೆಲ್ಫೀ ಫೋಟೋ ತೆಗೆದು ಇಲಾಖಾ ಟೆಲಿ ಗ್ರಾಂ ಗ್ರೂಪ್‍ನಲ್ಲಿ ಹಾಕುವಂತೆ ಇಲಾಖೆ ಆದೇಶಿಸಿದೆ. ಇದು ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಊಟ ವಿತರಣೆ ಮಾಡಲಾಗುತ್ತಿದೆಯೋ, ಇಲ್ಲವೋ ಎಂದು ತಿಳಿಯಲು ಇಲಾಖೆ ಈ ಕ್ರಮ ಕೈಗೊಂಡಿದೆ. ಎಸ್‍ಸಿ-ಎಸ್‍ಟಿ ವಸತಿ ನಿಲಯಗಳಲ್ಲಿ ಬಾಲಕ, ಬಾಲಕಿಯರು ಊಟ ಪಡೆಯಬೇಕಾದರೆ ಫೋಟೋ ತೆಗೆದು ಸಮಾಜ ಕಲ್ಯಾಣ ಇಲಾಖೆಯಿಂದ ರಚನೆಯಾಗಿರೋ ಎಸ್‍ಡಬ್ಲೂಡಿ ಟೆಲಿಗ್ರಾಂ ಗ್ರೂಪ್‍ಗೆ ಅಪ್‍ಲೋಡ್ ಮಾಡಬೇಕಂತೆ.

ಎಸ್‍ಡಬ್ಲ್ಯೂಡಿ ಟೆಲಿಗ್ರಾಂ ಗ್ರೂಪ್ ಗೆ ರಾಜ್ಯದ ಎಲ್ಲಾ ಬಾಲಕ, ಬಾಲಕಿಯರ ಫೋಟೋಗಳು ಅಪ್‍ಲೋಡ್ ಆಗುತ್ತವೆ. ಆದರೆ ಪ್ರತಿದಿನ ತೆಗೆದ ಫೋಟೋಗಳು ಎಲ್ಲಿ ಸೇವ್ ಆಗುತ್ತವೆ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಬಾಲಕಿಯರ ಫೋಟೋಗಳು ಅಪ್‍ಲೋಡ್ ಮಾಡಿದರೆ ದುರ್ಬಳಕೆಯಾಗುವ ಅವಕಾಶ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ಪೋಷಕರಲ್ಲಿ ಅತಂಕ ಮೂಡಿದೆ.

ಹೀಗಾಗಿ ಕೂಡಲೇ ಆದೇಶವನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ವಕೀಲರು, ವಿದ್ಯಾರ್ಥಿ ಪೋಷಕರ ಸಂಘ ಎಚ್ಚರಿಕೆ ನೀಡಿದೆ.

Comments

Leave a Reply

Your email address will not be published. Required fields are marked *