ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಲಿಂಕ್ – ಕೇಂದ್ರಕ್ಕೆ ಸುಪ್ರೀಂನಿಂದ ನೋಟಿಸ್ ಜಾರಿ

ನವದೆಹಲಿ: ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಖಾತೆಯನ್ನು ಲಿಂಕ್ ಮಾಡುವ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ, ಗೂಗಲ್, ಟ್ವಿಟ್ಟರ್, ಯೂ ಟ್ಯೂಬ್ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಫೇಸ್‍ಬುಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಬೇಕೆಂದು ದೇಶದ ವಿವಿಧ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಡೆಯಬೇಕೆಂದು ಫೇಸ್‍ಬುಕ್ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾ.ದೀಪಕ್ ಗುಪ್ತಾ ಹಾಗೂ ಅನಿರುದ್ಧ ಭೋಸ್ ಅವರಿದ್ದ ಪೀಠದಲ್ಲಿ ನಡೆಯಿತು.

ತಮಿಳುನಾಡು ಸರ್ಕಾರದ ಪರವಾಗಿ ವಾದ ಮಾಡಿದ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಸಾಮಾಜಿಕ ಜಾಲತಾಣಗಳ ಬಳಕೆದಾರರು ಕಡ್ಡಾಯವಾಗಿ ಆಧಾರ್ ನಂಬರ್ ಲಿಂಕ್ ಮಾಡಿಕೊಳ್ಳಬೇಕು ಎಂದು ವಾದಿಸಿದರು. ಸಾಮಾಜಿಕ ಜಾಲತಾಣಗಳೊಂದಿಗೆ ಆಧಾರ್ ನಂಬರ್ ಲಿಂಕ್ ಮಾಡುವುದರಿಂದ ಭಯೋತ್ಪಾದಕ ಸಂದೇಶ, ಅಶ್ಲೀಲ ಚಿತ್ರಗಳು ಹಾಗೂ ನಕಲಿ ಸುದ್ದಿಗಳನ್ನು ಹರಿಬಿಟ್ಟವರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ ಎಂದು ಬಲವಾದ ವಾದ ಮಂಡಿಸಿದರು.

ಫೇಸ್‍ಬುಕ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ, ಇದು ಅಂತರಾಷ್ಟ್ರೀಯ ವಿಷಯವಾಗಿದ್ದು, ಕೇಂದ್ರ ಸರ್ಕಾರ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು, ಹೈ ಕೋರ್ಟ್ ಗಳು ಹಸ್ತಕ್ಷೇಪ ಮಾಡಬಾರದು ಎಂದು ಮನವಿ ಮಾಡಿದರು.

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ವಾಟ್ಸಪ್ ಪರ ವಾದ ಮಂಡಿಸಿ, ವಾಟ್ಸಪ್ ಜಾಗತಿಕ ಉತ್ಪನ್ನವಾಗಿದೆ. ಇದರ ಬಳಕೆದಾರರು ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಇದ್ದಾರೆ. ಹೀಗಾಗಿ ಈ ಕುರಿತ ಮಧ್ಯಂತರ ಆದೇಶವು ಕೇವಲ ಭಾರತ ಮಾತ್ರವಲ್ಲ ಜಾಗತಿಕವಾಗಿಯೂ ಅನ್ವಯವಾಗುತ್ತದೆ. ದೇಶದ ವಿವಿಧ ಹೈ ಕೋರ್ಟ್‍ಗಳು ವಿಭಿನ್ನ ಆದೇಶಗಳನ್ನು ನೀಡಲು ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡು ಒಂದೇ ಬಾರಿಗೆ ನಿರ್ಧರಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.

ಎರಡು ಕಡೆಯ ವಾದವನ್ನು ಆಲಿಸಿದ ದ್ವಿಸದಸ್ಯ ಪೀಠ ಮದ್ರಾಸ್ ಹೈ ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆ ಮುಂದುವರಿಸಬಹುದು. ಆದರೆ, ಪ್ರಕರಣದ ಕುರಿತು ಅಂತಿಮ ಆದೇಶವನ್ನು ನೀಡುವಂತಿಲ್ಲ ಎಂದು ಆದೇಶಿಸಿ ಕೇಂದ್ರ ಸರ್ಕಾರ, ಗೂಗಲ್ ಯೂ ಟ್ಯೂಬ್, ಟ್ವಿಟ್ಟರ್ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿ ಈ ವಿಚಾರದ ಬಗ್ಗೆ ನಿಮ್ಮ ನಿಲುವು ತಿಳಿಸಿ ಎಂದು ಸೂಚಿಸಿದೆ.

Comments

Leave a Reply

Your email address will not be published. Required fields are marked *