ಸಿಎಂ ಆದ ಬೆನ್ನಲ್ಲೇ ಎಚ್‍ಡಿಕೆಗೆ ಬೆಟ್ಟದಷ್ಟು ಸವಾಲುಗಳು!

ರಾಮನಗರ: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಎಚ್‍ಡಿ ಕುಮಾರಸ್ವಾಮಿಯವರಿಗೆ ಸ್ವಕ್ಷೇತ್ರ ರಾಮನಗರದಲ್ಲಿ ಬೆಟ್ಟದಷ್ಟು ಸವಾಲುಗಳು ಎದುರಾಗಿವೆ.

ರೇಷ್ಮೆನಗರಿ ರಾಮನಗರ ಹಾಗೂ ಬೊಂಬೆನಗರಿ ಚನ್ನಪಟ್ಟಣ ಇವೆರಡೂ ಕೂಡ ಅವಳಿ ನಗರಗಳು. ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿದ್ದು, ಬೆಂಗಳೂರು -ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಅಕ್ಕಪಕ್ಕದಲ್ಲಿಯೇ ಇರುವ ಈ ಎರಡು ನಗರಗಳು ದಿನದಿಂದ ದಿನ ಬೆಳೆಯುತ್ತಿವೆ. ಅಷ್ಟೆ ಅಲ್ಲದೇ ರಾಜ್ಯ ರಾಜಕಾರಣದಲ್ಲೂ ಕೂಡ ಸಾಕಷ್ಟು ಹೆಸರು ಮಾಡಿವೆ. ಇಂತಹ ಎರಡು ಕ್ಷೇತ್ರಗಳಿಂದ ಕುಮಾರಸ್ವಾಮಿ ಅವರು ಸ್ವರ್ಧಿಸಿ ಗೆಲುವು ಸಾಧಿಸಿ, ಇದೀಗ ರಾಮನಗರಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣ ಕ್ಷೇತ್ರವನ್ನ ಉಳಿಸಿಕೊಂಡಿದ್ದಾರೆ.

ಎರಡು ಕ್ಷೇತ್ರಗಳಲ್ಲೂ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿವೆ. ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರೋ ರಾಜೀವ್ ಗಾಂಧಿ ಆರೋಗ್ಯ ವಿವಿಯ ಕಟ್ಟಡ ಕಾಮಗಾರಿ, ಹತ್ತಾರು ವರ್ಷದಿಂದ ಬಂದ್ ಆಗಿರುವ ಕೆಎಸ್‍ಐಸಿಯ ಸಿಲ್ಕ್ ಮಿಲ್‍ನ್ನು ಪುನಃ ಆರಂಭಿಸಬೇಕಿದೆ. ವಿವಿ ಪ್ರಾರಂಭವಾದರೆ ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗೆ ಪರಿಹಾರ ಕೂಡ ಸಿಗಲಿದೆ.

ಇನ್ನೂ ಜಿಲ್ಲೆಯಲ್ಲಿ ಅಧಿಕಾರಿಗಳ ಬೆಂಬಲದಿಂದ ಆಕ್ರಮ ಮರಳುಗಾರಿಕೆ ಮೂಲಕ ರಾಜಾರೋಷವಾಗಿ ಮರಳು ಸಾಗಾಟ ನಡೆಯುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಜೊತೆಗೆ ಏತನೀರಾವರಿ ಯೋಜನೆ ಶಾಶ್ವತ ನೀರಾವರಿ ಯೋಜನೆಯಾಗಬೇಕೆಂಬುದು ಬೊಂಬೆನಗರಿ ಜನರ ಆಗ್ರಹವಾಗಿದೆ.

ಇದರ ಜೊತೆಗೆ ಚೀನಾ ಬೊಂಬೆಗಳ ಹಾವಳಿಗೆ ಸಿಲುಕಿ ಮೂಲೆಗುಂಪಾಗುತ್ತಿರುವ ಬೊಂಬೆ ತಯಾರಕರ ಬೊಂಬೆಗಳ ನೆರವಿಗೆ ರಾಜ್ಯ ಸರ್ಕಾರ ನಿಲ್ಲಬೇಕು. ಅರ್ಕಾವತಿ ನದಿಗೆ ಥೇಮ್ಸ್ ನದಿ ಕಲ್ಪನೆ ಸಾಕಾರವಾಗಬೇಕು ಎಂಬುದರ ಜೊತೆಗೆ ರಸ್ತೆ ಡಾಂಬರೀಕರಣ, ಉತ್ತಮವಾದ ಕಾಲೇಜುಗಳ ಸ್ಥಾಪನೆಯಾಗಬೇಕು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಬೇಕು ಎಂಬುದು ಸ್ಥಳೀಯರ ಒತ್ತಾಯಗಳಾಗಿವೆ.

ಎರಡು ಕ್ಷೇತ್ರಗಳಲ್ಲಿನ ಸಾಕಷ್ಟು ಮೂಲಭೂತ ಸಮಸ್ಯೆಗಳ ಜೊತೆಗೆ ಅವಳಿ ನಗರಗಳನ್ನ ಅಭಿವೃದ್ದಿಪಡಿಸಬೇಕಾದ ಸವಾಲುಗಳು ಇದೀಗ ಎಚ್‍ಡಿಕೆ ಹೆಗಲ ಮೇಲಿದೆ.

Comments

Leave a Reply

Your email address will not be published. Required fields are marked *