ತನಗೆ ಕಚ್ಚಿದ ಹಾವಿಗೆ ತಾನೂ ಮೂರು ಬಾರಿ ಕಚ್ಚಿ ನಂತ್ರ ಸಾಯಿಸಿದ!

ಪಾಟ್ನಾ: ಹಾವೊಂದು ಕಾರ್ಮಿಕನಿಗೆ ಎರಡು ಬಾರಿ ಕಚ್ಚಿದ್ದು, ಇದರಿಂದ ಕೋಪಗೊಂಡ ಆತ ಹಾವಿಗೆ ಮೂರು ಬಾರಿ ಕಚ್ಚಿದ್ದ ವಿಲಕ್ಷಣ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.

ಈ ಘಟನೆ ನವಾಡದ ರಾಜೌಲಿ ಪ್ರದೇಶದಲ್ಲಿ ನಡೆದಿದೆ. ಹಾವಿಗೆ ಕಚ್ಚಿದವನನ್ನು ಸಂತೋಷ್ ಲೋಹರ್ ಎಂದು ಗುರುತಿಸಲಾಗಿದ್ದು, ಇವರು ರಾಜೌಲಿಯಲ್ಲಿ ರೈಲ್ವೆ ಮಾರ್ಗ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ನಡೆದಿದ್ದೇನು..?: ಮಂಗಳವಾರ ರಾತ್ರಿ ತನ್ನ ಬೇಸ್ ಕ್ಯಾಂಪ್‌ನಲ್ಲಿ ಮಲಗಿದ್ದರು. ಈ ವೇಳೆ ಅವರಿಗೆ ಹಾವು ಕಚ್ಚಿದೆ. ಗಾಬರಿಯಾಗುವ ಬದಲು ಸಿಟ್ಟಿಗೆದ್ದ ಸಂತೋಷ್, ಕಬ್ಬಿಣದ ಸಲಾಕೆಯನ್ನು ಬಳಸಿಕೊಂಡು ಹಾವನ್ನು ಹಿಡಿದಿದ್ದಾರೆ. ಬಳಿಕ ಒಂದಲ್ಲ ಬರೋಬ್ಬರಿ ಮೂರು ಬಾರಿ ಕಚ್ಚಿದ್ದಾರೆ. ಕೊನೆಗೆ ಹಾವನ್ನು ಕೊಂದು ಹಾಕಿದ್ದಾರೆ. ಇದನ್ನೂ ಓದಿ: ಕುಖ್ಯಾತ ರೌಡಿಶೀಟರ್‌ಗಳ ಫ್ಯಾನ್ ಫಾಲೋಯಿಂಗ್ ಗ್ರೂಪ್ ಮೇಲೆ ಸಿಸಿಬಿ ಕಣ್ಣು

ಬಳಿಕ ಈ ಬಗ್ಗೆ ಕಾರ್ಮಿಕನನ್ನು ಕೇಳಿದಾಗ, ಹಳ್ಳಿಯಲ್ಲಿ ಹಾವು ಕಚ್ಚಿದರೆ ಅದನ್ನು ಎರಡು ಬಾರಿ ನಾವು ಕಚ್ಚಬೇಕು. ಹೀಗೆ ಮಾಡಿದರೆ ಹಾವಿನ ವಿಷ ಹರಡಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮೂಢನಂಬಿಕೆ ನಂಬಿ ಸಂತೋಷ ಈ ನಿರ್ಧಾರ ತೆಗೆದುಕೊಂಡಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಘಟನೆ ವರದಿಯಾದ ತಕ್ಷಣ ರೈಲ್ವೇ ಅಧಿಕಾರಿಗಳು ಸಂತೋಷ್ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹಾವು ವಿಷಕಾರಿಯಾಗಿರಲಿಲ್ಲ, ಇಲ್ಲವಾದಲ್ಲಿ ಸಂತೋಷ್‌ನ ಜೀವಕ್ಕೆ ಗಂಭೀರ ಅಪಾಯ ಉಂಟಾಗಬಹುದೆಂದು ಸ್ಥಳೀಯರು ಊಹಿಸಿದ್ದಾರೆ.

ಜಾರ್ಖಂಡ್ ಮೂಲದ ಸಂತೋಷ್ ಅವರು ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಸತೀಶ್ ಚಂದ್ರ ತಿಳಿಸಿದ್ದಾರೆ.