ಮುಂಬೈ: ಅಖಿಲ ಭಾರತ ಮಜ್ಲಿಸ್ ಇ ಇಥೇಹಾದುಲ್ ಮುಸಲ್ಮಿನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿಯ ಮೇಲೆ ಶೂ ಎಸೆದಿರುವ ಘಟನೆ ಮಹಾರಾಷ್ಟ್ರದ ನಾಗ್ಪಾಡಾದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ನಾಗ್ಪಾಡದಲ್ಲಿ ನಡೆದ ರ‍್ಯಾಲಿಯಲ್ಲಿ ಓವೈಸಿ ಅವರು ಮಾತನಾಡುತ್ತಿದ್ದಾಗ ಯಾರೋ ಅವರ ಮೇಲೆ ಶೂ ಎಸೆದಿದ್ದಾರೆ. ಆದರೆ ಈ ಘಟನೆಯಿಂದ ಓವೈಸಿಗೆ ನೋವಾಗಿಲ್ಲ. ಶೂ ಎಸೆದ ವ್ಯಕ್ತಿಯನ್ನು ಗುರುತಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓವೈಸಿ ನಾಗ್ಪಾಡದಲ್ಲಿ ಮಂಗಳವಾರ ರಾತ್ರಿ 10 ಗಂಟೆಯ ವೇಳೆ ಭಾಷಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅವರ ಮೇಲೆ ಶೂ ಎಸೆದಿದ್ದಾನೆ. ಈಗಾಗಲೇ ಶೂ ಎಸೆದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಘಟನೆಯಿಂದ ಓವೈಸಿ ತಮ್ಮ ಭಾಷಣವನ್ನು ನಿಲ್ಲಿಸದೆ ಮುಂದುವರೆಸಿದ್ದು, “ನನ್ನ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ನನ್ನ ಜೀವವನ್ನು ತ್ಯಜಿಸಲು ನಾನು ಸಿದ್ಧನಿದ್ದೇನೆ. ತ್ರಿವಳಿ ತಲಾಖ್‍ನಲ್ಲಿ ಸರ್ಕಾರದ ನಿರ್ಧಾರದಿಂದ ಜನರು ನಿರಾಶೆಗೊಂಡಿದ್ದು, ಅದನ್ನು ಸಾಮಾನ್ಯ ಜನರ ಅದರಲ್ಲೂ ನಿರ್ದಿಷ್ಟವಾಗಿ ಮುಸ್ಲಿಮರು ಸ್ವೀಕರಿಸಲಿಲ್ಲ” ಎಂದು ಹೇಳಿದರು.
ಶೂ ಎಸೆದ ವ್ಯಕ್ತಿಯ ಗುರುತನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


Leave a Reply