ಎಟಿಎಂನಿಂದ ಪದೇ ಪದೇ ಹಣ ಡ್ರಾ ಮಾಡ್ತೀರಾ? ಹೊಸ ನಿಯಮಕ್ಕೆ ಎಸ್‍ಎಲ್‍ಬಿಸಿ ಚಿಂತನೆ

ನವದೆಹಲಿ: ಎಟಿಎಂ ಕಾರ್ಡ್ ದುರ್ಬಳಕೆ ತಡೆಯುವ ಹಿನ್ನೆಲೆಯಲ್ಲಿ ದೆಹಲಿಯ ರಾಜ್ಯಮಟ್ಟದ ಬ್ಯಾಂಕರ್ಸ್ ಸಮಿತಿ (ಎಸ್‍ಎಲ್‍ಬಿಸಿ) ಹೊಸ ಚಿಂತನೆಗೆ ಮುಂದಾಗಿದೆ. ಈ ಸಮಿತಿ ಎರಡು ಎಟಿಎಂ ವ್ಯವಹಾರ ನಡುವೆ ಸಮಯ ನಿಗದಿಗೆ ಚಿಂತನೆ ನಡೆಸಿದೆ.

ಒಂದು ವೇಳೆ ಎಸ್‍ಎಲ್‍ಬಿಸಿ ಸಮಿತಿಯ ಪ್ರಸ್ತಾವವನ್ನು ಬ್ಯಾಂಕ್ ಒಪ್ಪಿಕೊಂಡಲ್ಲಿ ಈ ಹೊಸ ನಿಯಮ ಜಾರಿಯಾಗುವ ಸಾಧ್ಯತೆಗಳಿವೆ. ಒಂದು ಎಟಿಎಂ ಕಾರ್ಡ್ ನ ಎರಡು ವ್ಯವಹಾರಗಳ ನಡುವೆ ಅಂದಾಜು 6 ರಿಂದ 12 ಗಂಟೆ ಸಮಯ ನಿಗದಿಗೆ ಸಮಿತಿ ಸಲಹೆ ನೀಡಿದೆ. ಅಂದ್ರೆ ಒಮ್ಮೆ ನೀವು ಎಟಿಎಂನಿಂದ ಹಣ ತೆಗೆದರೆ ಪುನಃ 6 ರಿಂದ 12 ಗಂಟೆವರೆಗೆ ಅದೇ ಕಾರ್ಡ್ ನಿಂದ ಡ್ರಾ ಮಾಡಲು ಸಾಧ್ಯವಾಗಲ್ಲ. ಈ ಬಗ್ಗೆ ಕೇವಲ ಚರ್ಚೆಗಳು ನಡೆದಿದ್ದು, ಕಾರ್ಯರೂಪಕ್ಕೆ ಬಂದಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿಯ ಎಸ್‍ಎಲ್‍ಬಿಸಿ ಸಂಯೋಜಕರು ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಎಂಡಿ, ಸಿಇಓ ಮುಕೇಶ್ ಕುಮಾರ್ ಜೈನ್, ಎಟಿಎಂನಲ್ಲಿ ಕಾರ್ಡ್ ದುರ್ಬಳಕೆ ಅಪರಾಧ ಪ್ರಕರಣಗಳು ಹೆಚ್ಚಾಗಿ ರಾತ್ರಿ ಮತ್ತು ಬೆಳಗಿನ ಜಾವದ ನಡುವೆಯೇ ಹೆಚ್ಚಾಗಿ ನಡೆದಿವೆ. ಈ ನಿಗದಿತ ಸಮಯದಲ್ಲಿ ಕಾರ್ಡ್ ದುರ್ಬಳಕೆ ಹೆಚ್ಚಾಗಿ ಕಂಡು ಬಂದಿದೆ. ಸಮಿತಿ ನಮ್ಮ ಮುಂದೆ ಪ್ರಸ್ತಾವವನ್ನು ಇಟ್ಟಿದ್ದು, ಕಳೆದ ಒಂದು ವಾರದಿಂದ 18 ಬ್ಯಾಂಕ್ ಗಳ ಪ್ರತಿನಿಧಿಗಳು ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

2018-19ರ ವೇಳೆ ದೆಹಲಿಯಲ್ಲಿ 179, ಮಹಾರಾಷ್ಟ್ರದಲ್ಲಿ 233 ಎಟಿಎಂ ವಂಚನೆ ಪ್ರಕರಣಗಳು ದಾಖಲಾಗಿವೆ. 2018-19ರ ಅವಧಿಯಲ್ಲಿ ಇದೂವರೆಗೂ ದೇಶದೆಲ್ಲಡೆ 980ಕ್ಕೂ ಅಧಿಕ ದೂರು ದಾಖಲಾಗಿವೆ. ಕಳೆದ ವರ್ಷ 911 ಪ್ರಕರಣಗಳು ದಾಖಲಾಗಿತ್ತು. ಇತ್ತೀಚೆಗೆ ಎಟಿಎಂ ಕಾರ್ಡ್ ಕ್ಲೋನಿಂಗ್ (ಬಳಕೆದಾರರ ಮಾಹಿತಿಯ ಕಳ್ಳತನ) ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ ವಿದೇಶಿ ಪ್ರಜೆಗಳು ಭಾಗಿಯಾಗಿರುವ ಶಂಕೆಗಳು ವ್ಯಕ್ತವಾಗಿವೆ.

ಎಟಿಎಂನಿಂದ ಹೆಚ್ಚಿನ ಹಣ ಡ್ರಾ ಮಾಡುವಾಗ ಗ್ರಾಹಕರ ಮೊಬೈಲ್ ಗೆ ಸಂದೇಶ ಕಳುಹಿಸಿ, ಓಟಿಪಿ ನಂಬರ್ ಪಡೆಯುವ ವ್ಯವಸ್ಥೆ ರೂಪಿಸಲು ಸಹ ಚಿಂತಿಸಲಾಗಿದೆ. ಈ ರೀತಿಯ ವ್ಯವಸ್ಥೆಯಿಂದ ಡೆಬಿಟ್, ಕ್ರೆಡಿಟ್ ಕಾರ್ಡ್ ಗಳ ದುರ್ಬಳಕೆ ತಡೆಯಲು ಸಾಧ್ಯವಾಗಲಿದೆ. ಬೇರೆಯವರು ನಿಮ್ಮ ಕಾರ್ಡ್ ನಿಂದ ಹಣ ಡ್ರಾ ಮಾಡುತ್ತಿದ್ದರೆ, ಮೆಸೇಜ್ ಮೂಲಕ ಎಚ್ಚೆತ್ತುಕೊಳ್ಳಬಹುದು ಎಂದು ಮುಕೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *