ರಸ್ತೆ ಅಪಘಾತಕ್ಕೆ ಒಂದೇ ದಿನ ಆರು ಮಂದಿ ಬಲಿ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನ ರಸ್ತೆ ಅಪಘಾತಕ್ಕೆ ಆರು ಮಂದಿ ಬಲಿಯಾಗಿರುವ ಘಟನೆ ನಡೆದಿದೆ.

ಸುರೇಖಾ, ಮಗಳು ಆರಾಧ್ಯ, ಭಾರತ್, ಅಮರನಾಥ್ ಸಿಂಗ್ ಮತ್ತು ಸುಬೇಂದ್ ಸಿಂಗ್ ಮೃತ ದುರ್ದೈವಿಗಳು. ರಘು, ಸುರೇಖಾ ಹಾಗು ಪುತ್ರಿ ಆರಾಧ್ಯ ಮೂಲತಃ ಕುಂದಾಪುರದವರಾಗಿದ್ದು, ರಘು ಆರ್ ಟಿ ನಗರದಲ್ಲಿ ಟೀ ಅಂಗಡಿ ನಡೆಸುತ್ತಿದ್ದರು.

ರಘು ಗುರುವಾರ ಹಬ್ಬದ ಪ್ರಯುಕ್ತ ಅಂಗಡಿಗೆ ರಜೆ ಹಾಕಿ ಹೆಂಡತಿ ಮಗಳೊಡನೆ ವಿನಾಯಕ ಚೌತಿಯನ್ನ ಅದ್ಧೂರಿಯಾಗಿ ಆಚರಿಸಿ ಸಂಜೆ ಸಂಬಂಧಿಯೊಬ್ಬರ ಮನೆಗೆ ನಾಗವಾರದ ಬಳಿ ಹೋಗಿದ್ದರು. ಹಬ್ಬದ ಊಟ ಮಾಡಿ ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಲುಂಬಿಣಿ ಗಾರ್ಡನ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸುರೇಖಾ ಹಾಗೂ ಆರಾಧ್ಯ ರಘು ಕಣ್ಣೆದುರೇ ಸಾವನ್ನಪ್ಪಿದ್ದು, ಅದೃಷ್ಟವಶಾತ್ ರಘು ಬದುಕುಳಿದಿದ್ದಾರೆ.

ನೈಸ್ ರಸ್ತೆಯ ಕೊಮ್ಮಘಟ್ಟ ಬ್ರಿಡ್ಜ್ ಬಳಿ ನಡೆದ ಭೀಕರ ಅಪಘಾತದಲ್ಲಿ ಭರತ್ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುರುವಾರ ತಡರಾತ್ರಿ ಭರತ್ ತನ್ನ ಸ್ನೇಹಿತ ಜಯಂತ್ ಹಾಗೂ ಉದಯ್ ರೊಂದಿಗೆ ಸ್ವಿಫ್ಟ್ ಕಾರಿನಲ್ಲಿ ನೈಸ್ ರಸ್ತೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಹೆಮ್ಮಿಗೆಪುರ ಸೇತುವೆ ಸಮೀಪ ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಭರತ್ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಜಯಂತ್ ಹಾಗೂ ಉದಯ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮತ್ತೊಂದು ಕಡೆ ಕೆ.ಆರ್. ಪುರಂನ ಕಾಟಂ ನಲ್ಲೂರು ಕ್ರಾಸ್ ಬಳಿ ಸರಣಿ ಅಪಘಾತವಾಗಿ ಅಮರನಾಥ್ ಸಿಂಗ್ ಹಾಗೂ ಸುಬೇಂದ್ ಸಿಂಗ್ ಮೃತಪಟ್ಟಿದ್ದಾರೆ. ಇನ್ನು ಜಾಲಹಳ್ಳಿ ಕ್ರಾಸ್‍ ನಲ್ಲಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರನೊಬ್ಬ  ಮೃತಪಟ್ಟಿದ್ದಾರೆ. ಆದರೆ ಈ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *